ಕನ್ನಡಪ್ರಭ ವಾರ್ತೆ ಮುಧೋಳ
ಬೆಂಗಳೂರು, ಮಂಗಳೂರು, ಮೈಸೂರು, ಕಲಬುರ್ಗಿ, ಧಾರವಾಡ-ಹುಬ್ಬಳ್ಳಿ ಮುಂತಾದ ನಗರಗಳಲ್ಲಿನ ಶಾಲಾ-ಕಾಲೇಜುಗಳಲ್ಲಿರುವ ಸೌಲಭ್ಯಗಳನ್ನು ಮುಧೋಳ ಪಟ್ಟಣದ ಹೊರವಲಯದಲ್ಲಿರುವ ಮುಧೋಳ ರಾಯಲ್ ಸ್ಕೂಲ್ ಎಲ್ಲವನ್ನೂ ಒದಗಿಸಿಕೊಟ್ಟಿದೆ ಎಂದು ನಗರದ ಹಿರಿಯ ವೈದ್ಯ ಡಾ.ವಿ.ಎನ್.ನಾಯಕ ಹೇಳಿದರು.ಮುಧೋಳ ರಾಯಲ್ ಸ್ಕೂಲ್‌ನಲ್ಲಿ ರಾಯಲ್ ಶಾಲೆಯ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ಅರಳಿಕಟ್ಟಿ ಅವರು ನಗರದ 21 ಜನ ವೈದ್ಯರನ್ನು ಆಹ್ವಾನಿಸಿ ಅವರಿಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಸನ್ಮಾನ ಆಯೋಜಿಸಿರುವುದರಿಂದ ಮಕ್ಕಳ ಮೇಲೆ ವಿಶೇಷ ಪರಿಣಾಮ ಬೀರಿ ತಾವು ಕೂಡ ವೈದ್ಯರಾಗಬೇಕೆಂಬ ಭಾವನೆ ಮೂಡಲು ಸಾಧ್ಯವಾಗುತ್ತದೆ ಎಂದರು.ಅತಿಥಿ ಡಾ.ಶಿವಾನಂದ ಕುಬಸದ ಮಾತನಾಡಿ, ಇದೇ ಪ್ರಥಮ ಬ್ಯಾಚ್‌ನಲ್ಲಿ ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 22 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರಲ್ಲದೇ ಸಮರ್ಥ ನಲವಡೆ ವಿದ್ಯಾರ್ಥಿ ಶೇ.99ರಷ್ಟು ಅಂಕ ಪಡೆದು ರಾಜ್ಯಕ್ಕೆ 9ನೇ ರ್‍ಯಾಂಕ್ ಪಡೆದುಕೊಂಡು ಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ. ಶೇ.100ರಷ್ಟು ಫಲಿತಾಂಶ ಬಂದಿದೆಂದರೇ ಈ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಬಿಂಬಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಖ್ಯಾತ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್ ಮಾತನಾಡಿ, ನಾನು ಸಾಕಷ್ಟು ಕಡೆ ಹೋಗಿದ್ದೇನೆ. ಆದರೆ, ಇಂತಹ ಶಾಲೆ ನೋಡಿ ಅತೀವ ಸಂತಸ ತಂದಿದೆ ಎಂದು ಶ್ಲಾಘಿಸಿದರು.ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ, ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ರಜತ ಸಾಧಕರು ಪ್ರಶಸ್ತಿ ಪುರಸ್ಕೃತ ಡಾ.ತಿಮ್ಮಣ್ಣ ಅರಳಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯಿಂದ ಸಂಸ್ಥೆಯ ಕೀರ್ತಿ ಇಮ್ಮಡಿಗೊಂಡಿದೆಂದು ಶಾಲಾ ಶಿಕ್ಷಕ ವೃಂದಕ್ಕೆ, ವಿದ್ಯಾರ್ಥಿಗಳಿಗೆ, ಪಾಲಕರಿಗೆ ಅಭಿನಂದನೆ ಸಲ್ಲಿಸಿದರು. ಡಾ.ಮೋಹನ ಬಿರಾದಾರ ಸಾಂದರ್ಭಿಕವಾಗಿ ಮಾತನಾಡಿ, ಶಾಲಾ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದರು.ನಗರದ ಡಾ.ಉದಯ ನಾಯಿಕ, ಡಾ.ವೆಂಕಟೇಶ ಮಲಘಾಣ, ಡಾ.ರಾಜೇಶ ತಲಾಠಿ, ಡಾ.ಬಸರಡ್ಡಿ, ಡಾ.ಘಾರಗೆ, ಡಾ.ಕಮಕೇರಿ, ಡಾ.ತಿರ್ಲಾಪೂರ, ಡಾ.ತಮ್ಮಣ್ಣಗೌಡ್ರ, ಡಾ.ಅಂತಾಪೂರ ಹಾಗೂ ರಾಯಲ್ ಸ್ಕೂಲ್ ಅಧ್ಯಕ್ಷೆ, ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸುವರ್ಣ ಸಾಧಕಿ-25 ಪ್ರಶಸ್ತಿ ಪುರಸ್ಕೃತೆ ಸವಿತಾ ತಿಮ್ಮಣ್ಣ ಅರಳಿಕಟ್ಟಿ, ಕಾರ್ಯದರ್ಶಿ ವಿನಾಯಕ ತಿಮ್ಮಣ್ಣ ಅರಳಿಕಟ್ಟಿ, ಆಡಳಿತಾಧಿಕಾರಿ ಇಂದಿರಾ ಸಾತನೂರ, ರಾಜೇಶ್ವರಿ ಕೋಮಾರ, ವರ್ಷಾ ತಲಾಠ, ನಟರಾಜ್ ಇತರರು ಇದ್ದರು.ಸ್ಕೂಲ್ ಪ್ರಾಚಾರ್ಯ ಚಂದ್ರಶೇಖರ ನಾಗವಂದ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಚಾರ್ಯ ಮಾರುತಿ ಪವಾರ ವಂದಿಸಿದರು.
ಶಾಲಾ ಸಿಬ್ಬಂದಿ ಮತ್ತು ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಒಳ್ಳೆಯ ವಾತಾವರಣ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನುಭವಿ ಬೋಧಕ ಸಿಬ್ಬಂದಿ ವರ್ಗ, ಸುಸಜ್ಜಿತ ವಸತಿ ನಿಲಯ, ಆಟದ ಮೈದಾನ, ಈಜುಗೋಳ ಸೇರಿದಂತೆ ಇತರೆ ಸೌಕರ್ಯಗಳನ್ನು ಹೊಂದಿರುವ ಪರಿಣಾಮ ಗ್ರಾಮೀಣ ಭಾಗದ ಪಾಲಕರು ಇವುಗಳನ್ನು ಗಮನಿಸಿ ತಮ್ಮ ಮಕ್ಕಳನ್ನು ಮುಧೋಳ ರಾಯಲ್ ಸ್ಕೂಲ್ ನಲ್ಲಿ ಪ್ರವೇಶ ಪಡೆದುಕೊಂಡಿರುವುದು ಸಂತಸ ತಂದಿದೆ.ಡಾ.ವಿ.ಎನ್.ನಾಯಕ,
ನಗರದ ಹಿರಿಯ ವೈದ್ಯರು.ಮುಧೋಳ ರಾಯಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ, ಶಿಕ್ಷಕರ ಮತ್ತು ಪಾಲಕರ ಶ್ರಮ, ಆಡಳಿತ ಮಂಡಳಿಯ ಪ್ರಯತ್ನ ಮತ್ತು ಶಾಲೆಯಲ್ಲಿರುವ ಸೌಲಭ್ಯಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಲು ಸಾಧ್ಯವಾಯಿತು. ಕಾರಣ ತಾಲೂಕಿನ ಹಾಗೂ ಜಿಲ್ಲೆಯ ವಿಶೇಷವಾಗಿ ಗ್ರಾಮೀಣ ಭಾಗದ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಯಲ್ಲಿಯೇ ಶಿಕ್ಷಣ ಕೊಡಿಸಿದರೇ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ.-ರಾಜೇಶ ಕೃಷ್ಣನ್, ಖ್ಯಾತ ಹಿನ್ನೆಲೆ ಗಾಯಕರು.