ಅಂಬೇಡ್ಕರ್ ಭವನ ನಿರ್ವಹಣೆಗೆ ೧ ಕೋಟಿ ರು. ಅನುದಾನ: ಡಾ.ಕುಮಾರ

| Published : Jul 07 2025, 11:47 PM IST

ಸಾರಾಂಶ

ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸುವವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಭವನಕ್ಕೆ ಆಗಮಿಸುವ ವೀಕ್ಷಕರಿಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಿ, ಭವನದ ಹೊರ ಆವರಣ, ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಡಾ.ಬಿ.ಆರ್.ಅಂಬೇಡ್ಕರ್ ಭವನದ ನಿರ್ವಹಣೆಗೆ ೧ ಕೋಟಿ ರು. ಹೆಚ್ಚಿನ ಅನುದಾನ ಮಂಜೂರಾಗಿದ್ದು, ಮೊದಲ ಹಂತದಲ್ಲಿ ೨೫ ಲಕ್ಷ ರು. ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊದಲ ಹಂತದಲ್ಲಿ ಭವನಕ್ಕೆ ಕುರ್ಚಿಗಳು, ಟೇಬಲ್‌ಗಳು, ಫ್ಯಾನ್‌ಗಳು, ಮಿನಿ ಹಾಲ್, ಜನರೇಟರ್, ಪೆಯಿಂಟಿಂಗ್, ನೀರಿನ ಸೋರಿಕೆ ದುರಸ್ತಿ, ಸಣ್ಣ ಪುಟ್ಟ ಕೆಲಸಗಳು ಅವಶ್ಯಕವಾಗಿದ್ದು ಇದನ್ನು ಹಾಲಿ ಬಿಡುಗಡೆಯಾಗಿರುವ ಹಣದಲ್ಲಿ ಸರಿಪಡಿಸಲಾಗುವುದು ಎಂದರು.

ಅಂಬೇಡ್ಕರ್ ಭವನ ನಿರ್ಮಾಣದಲ್ಲಿ ತೊಂದರೆ ಇದೆ ಎಂದು ದೂರು ಸಲ್ಲಿಕೆಯಾಗಿತ್ತು, ಇದನ್ನು ಪರಿಶೀಲಿಸಿ ವರದಿ ಸಲ್ಲಿಕೆಯಾಗಿದೆ ಎಂದರು.

ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸುವವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಭವನಕ್ಕೆ ಆಗಮಿಸುವ ವೀಕ್ಷಕರಿಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸಿ, ಭವನದ ಹೊರ ಆವರಣ, ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದರು.

ಅಧಿಕಾರಿಗಳು ಸರಿಯಾದ ಯೋಜನೆ ರೂಪಿಸಿ ಸಮಿತಿಗೆ ತಿಳಿಸಿದ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ವಾರದೊಳಗಾಗಿ ಯೋಜನೆ ಸಿದ್ಧಪಡಿಸುವಂತೆ ತಿಳಿಸಿದರಲ್ಲದೆ, ಮುಂದಿನ ಅನುದಾನದಲ್ಲಿ ಭವನಕ್ಕೆ ಸೋಲಾರ್ ಅಳವಡಿಸುವ ಚಿಂತನೆಯಲ್ಲಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಧನುಷ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಶ್ರೀ, ನಿರ್ಮಿತಿ ಕೇಂದ್ರದ ಜಯಪ್ರಕಾಶ್, ಡಾ.ಬಾಬು ಜಗಜೀವನರಾಂ ಸಂಘಟನೆಯ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್, ಮುಖಂಡರಾದ ಗುರು ಪ್ರಸಾದ್, ವೆಂಕಟಗಿರಿಯಯ್ಯ, ಮಹೇಶ್ ಕೃಷ್ಣ, ಎನ್.ಬಿ.ರಾಜು ಇತರರಿದ್ದರು.

ಏಷ್ಯನ್ ಮಟ್ಟದ ರೆಫರಿ ಪರೀಕ್ಷೆ ಉತ್ತೀರ್ಣ

ಕನ್ನಡಪ್ರಭ ವಾರ್ತೆ ಮಂಡ್ಯ

ಅಂತಾರಾಷ್ಟ್ರೀಯ ಕರಾಟೆ ತರಬೇತಿದಾರ ಡಾ.ಎಂ.ಆರ್.ವಿನಯ್‌ಕುಮಾರ್ ಶ್ರೀಲಂಕಾದಲ್ಲಿ ಏಷ್ಯನ್ ಕರಾಟೆ ಫೆಡರೇಷನ್ ನಡೆಸಿದ ಏಷ್ಯನ್ ಮಟ್ಟದ ರೆಫರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜುಲೈ ೨ರಿಂದ ೬ರವರೆಗೆ ನಡೆದ ರೆಫರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಕರಾಟೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮತ್ತು ಉನ್ನತ ಮಟ್ಟದ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯಿಂದ ಉತ್ತೀರ್ಣರಾದ ಮೊದಲ ವ್ಯಕ್ತಿಯಾಗಿ ಗಣ್ಯರಿಂದ ಪ್ರಮಾಣ ಪತ್ರ ಸ್ವೀಕರಿಸಿದರು.