ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ವಿಐಎಸ್ಎಲ್ ಕಾರ್ಖಾನೆಯನ್ನು ಆಂದ್ರದ ವೈಜಾಗ್ ಕಾರ್ಖಾನೆ ರೀತಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕೆ ಡಿಪಿಆರ್ ತಯಾರಾಗಿದೆ. ಅದೇ ರೀತಿಯಲ್ಲೇ ಶೇ. 100 ರಷ್ಟು ಹಣ ಒದಗಿಸಲಾಗುತ್ತಿದೆ. ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ 11500 ಕೋಟಿ ರು. ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಅವರು ಸಮೀಪದ ಮಲ್ಲಾಪುರದ ಗುಡ್ಡದ ಮಲ್ಲೇಶ್ವರ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಕಾರ್ಖಾನೆ ಅಭಿವೃದ್ಧಿಗೆ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಕೇಂದ್ರ ಸಚಿವೆ ನಿರ್ಮಲ ಸೀತರಾಮನ್ ಅವರೊಂದಿಗೆ ಹಲವಾರು ಬಾರಿ ಕುಮಾರಣ್ಣ ಮಾತನಾಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ಹಾಗೂ ಸರ್ ಎಂ. ವಿಶ‍್ವೇಶ‍್ವರಯ್ಯ ಹಾಗೂ ಮೈಸೂರು ರಾಜರು ಕಟ್ಟಿದ ಕಾರ್ಖಾನೆಯನ್ನು ಉಳಿಸಿದಂತಾಗುತ್ತದೆ. ಕಾಂಗ್ರೆಸ್ಸಿನ ಒಳಜಗಳದಿಂದ ಜನತೆ ಬೇಸತ್ತು ಹೋಗಿದ್ದಾರೆ. ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಒಕ್ಕೂಟ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೆದುರುತ್ತಿದೆ. ದೇವೇಗೌಡರಿಗೆ ಕನಸಿತ್ತು. 1996 ರಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕೊಡಲು ಕನಸು ಕಂಡಿದ್ದರು. ಲೋಕಸಭೆಯಲ್ಲಿ ಬಿಲ್ ಪಾಸಾಗಲಿಲ್ಲ. ಅದನ್ನ ಪ್ರಧಾನಿ ಮೋದಿ ನನಸು ಮಾಡಿದ್ದಾರೆ. ಶಾಸಕಿ ಶಾರದ ಪೂರ್ಯನಾಯ್ಕ ಅವರಿಗೆ ಸಚಿವ ಸ್ಥಾನ ಕೊಡಬೇಕಿದೆ. ಹಳೇ ಮೈಸೂರಿಗೆ ಸೀಮಿತವಾದ ಪಕ್ಷವೆಂದು ಎದುರಾಳಿಗಳು ಹೇಳ್ತಾರೆ. ಪಕ್ಷವನ್ನು ದಡ ಮುಟ್ಟಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಶಾಸಕಿ ಶಾರದಾ ಪೂರ್ಯನಾಯ್ಕ್, ಅನುದಾನದ ಕೊರತೆಯಿದ್ದು, ಯಾವುದೇ ಅಬಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಯಾವುದೇ ಕಾರಣಕ್ಕೂ ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗುವುದಕ್ಕೆ ಬಿಡುವುದಿಲ್ಲ ಎಂದು ತಿಳಿಸಿದರು.ಎಂಎಲ್ ಸಿ ಭೋಜೇಗೌಡ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕಿ ಶಾರದಾ ಪೂರ್ಯನಾಯ್ಕ್ ಅವರನ್ನ ಪಕ್ಷದಿಂದ ಕರೆದ್ಯೂಯಲು ಹಲವಾರು ಬಾರಿ ಪ್ರಯತ್ನ ಮಾಡಿದರು. ಶಾಸಕಿಯವರಿಗೆ ಕುಮಾರಣ್ಣನ ಮೇಲೆ ಇದ್ದ ವಿಶ್ವಾಸ ಹಾಗೂ ಅಭಿಮಾನದ ಕಾರಣ ಹೋಗಲಿಲ್ಲ. 2028 ರಲ್ಲಿ ಅವರು ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಇದಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿಯವರನ್ನ ಅರಹತೊಳಲು ಕೈಮರದಿಂದ ಮಲ್ಲಾಪುರದ ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ಕರೆ ತರಲಾಯಿತು.
ಕಾರ್ಯಕ್ರಮದದಲ್ಲಿ ಜೆಡಿಎಸ್ ಮಹಿಳಾ ರಾಜ್ಯಾಧ್ಯಕ್ಷೆ ಲಕ್ಷ್ಮೀ ನಾಗಯ್ಯ, ದೇವದುರ್ಗ ಶಾಸಕಿ ಕರೆಮ್ಮ, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಕಾಂತರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಮಾಜಿ ಎಪಿಎಂಸಿ ಸದಸ್ಯ ಸತೀಶ ಸೇರಿದಂತೆ ಇನ್ನಿತರರು ಹಾಜರಿದ್ದರು.ಕಾರ್ಯಕರ್ತರ ಸಭೆಯಲ್ಲಿ ಗೊಂದಲ, ಗದ್ದಲ
ವೇದಿಕೆಯ ಹಿಂಬದಿಯಲ್ಲಿ ಕುಳಿತಿದ್ದ ಕಾರ್ಯಕರ್ತರು ನಮ್ಮನ್ನು ಕಡೆಗಣಿಸಲಾಗುತ್ತಿದೆ. ಮುಂದೆ ಇರುವ ನೀವೇ ಎಲ್ಲಾ ಮಾಡಿದರೆ ನಾವೇಕೆ ಬರಬೇಕು ಎಂದು ಕೆಲವು ಸಮಯ ವಾಗ್ದಾದ ನಡೆಸಿದರು. ವೇದಿಕೆಯಲ್ಲಿ ಕಾರ್ಯಕರ್ತರ ಗೊಂದಲದಿಂದಾಗಿ ಕೆಳಗಿನ ಕಾರ್ಯಕರ್ತರು ವೇದಿಕೆ ಬಳಿ ಬಂದು ಗಲಾಟೆ ಮಾಡಲಾರಂಭಿಸಿದರು. ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಬಾಷಣದ ವೇಳೆ 2 ನಿಮಿಷಗಳ ಕಾಲ ಭಾಷಣ ನಿಲ್ಲಿಸಿದರು. ರಾಜ್ಯಾಧ್ಯಕ್ಷರ ಭಾಷಣ ವೇಳೆ ವೇದಿಕೆ ಮುಂಭಾಗದ ಬಹುತೇಕ ಖುರ್ಚಿಗಳು ಖಾಲಿಯಾಗಿದ್ದವು.