ಕೇಂದ್ರ ಉನ್ನತ ಶಿಕ್ಷಣ ಇಲಾಖೆಯಿಂದ ಕವಿವಿಗೆ ₹20 ಕೋಟಿ ಅನುದಾನ

| Published : Feb 21 2024, 02:01 AM IST

ಸಾರಾಂಶ

ಭಾರತ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ವಿವಿಗೆ 20 ಕೋಟಿ ಮಂಜೂರಾಗಿದ್ದು ಸಮಾಧಾನ ತಂದಿದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಬಲವರ್ಧನೆಗೆ ಭಾರತ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಮೂರು ವರ್ಷಗಳ ಅವಧಿಗೆ ₹20 ಕೋಟಿ ಅನುದಾನ ಮಂಜೂರಾಗಿದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು 2023 ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿಗಳ ಉಚ್ಚತರ ಶಿಕ್ಷಾ ಅಭಿಯಾನದ ಅಡಿಯಲ್ಲಿ ವಿಶ್ವವಿದ್ಯಾಲಯಗಳ ಬಲವರ್ಧನೆಗಾಗಿ ವಿವಿಗಳಿಂದ ಯೋಜನಾ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ಕವಿವಿಯಿಂದ ₹22 ಕೋಟಿಗಳ ಯೋಜನಾ ಪ್ರಸ್ತಾವನೆ ಕಳುಹಿಸಿತ್ತು. ದೇಶದ ಆಯ್ದ ವಿಶ್ವವಿದ್ಯಾಲಯಗಳಿಗೆ ಈ ಯೋಜನೆ ಅಡಿಯಲ್ಲಿ ಹಣ ಮಂಜೂರಾಗಿರಾಗಿದ್ದು, ಕರ್ನಾಟಕ ವಿವಿಗೆ ₹20 ಕೋಟಿ ಮಂಜೂರಾಗಿದ್ದು ಸಮಾಧಾನ ತಂದಿದೆ. ವಿವಿಯಲ್ಲಿ ಶೈಕ್ಷಣಿಕ ಸಂಶೋಧನೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸಂಶೋಧನಾ ಉಪಕರಣ ಸೌಲಭ್ಯಗಳಿಗೆ ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರ್ನಾಟಕ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಕೆಲ ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಅನುದಾನದ ನಿರೀಕ್ಷೆಯಲ್ಲಿದ್ದೇವು. ಅದು ಹುಸಿಯಾಗಿದ್ದು, ಇಲ್ಲಿಯವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಆದರೆ, ನಿವೃತ್ತರಿಗೆ ಪಿಂಚಣಿ ಬಿಡುಗಡೆಗಾಗಿ ₹92 ಕೋಟಿ ಪ್ರಸ್ತಾವನೆಯಲ್ಲಿ ಕೇಳಲಾಗಿತ್ತು. ಆ ಪೈಕಿ ₹50 ಕೋಟಿ ಬಿಡುಗಡೆಯಾಗಿದೆ. ಆದರೂ ವಿವಿಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರ್ಕಕೆ ಮನವಿ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಡಾ. ಎ. ಚನ್ನಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ನೋಡಲ್ ಅಧಿಕಾರಿ ಪ್ರೊ. ಆರ್.ಎಫ್.ಭಜಂತ್ರಿ ಇದ್ದರು.