೨೦೦ ಕೋಟಿ ರು. ವಂಚಕನ ವಾರ್ಡ್ ರೋಬ್ ನಲ್ಲಿತ್ತು ಕಳ್ಳದಾರಿ

| Published : Jul 19 2025, 01:00 AM IST

೨೦೦ ಕೋಟಿ ರು. ವಂಚಕನ ವಾರ್ಡ್ ರೋಬ್ ನಲ್ಲಿತ್ತು ಕಳ್ಳದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಹುಕೋಟಿ ರು. ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಂಗಳೂರು ಜಪ್ಪಿನಮೊಗರು ನಿವಾಸಿ ರೋಶನ್‌ ಸಲ್ಡಾನಾ (43) ಎಂಬಾತನ ಐಷಾರಾಮಿ ನಿವಾಸದಲ್ಲಿ ಕೋಟ್ಯಂತರ ರು. ಮೌಲ್ಯದ ಸೊತ್ತು, ಭಾರೀ ಪ್ರಮಾಣದ ದೇಶಿ- ವಿದೇಶಿ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರು. ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಂಗಳೂರು ಜಪ್ಪಿನಮೊಗರು ನಿವಾಸಿ ರೋಶನ್‌ ಸಲ್ಡಾನಾ (43) ಎಂಬಾತನ ಐಷಾರಾಮಿ ನಿವಾಸದಲ್ಲಿ ಕೋಟ್ಯಂತರ ರು. ಮೌಲ್ಯದ ಸೊತ್ತು, ಭಾರೀ ಪ್ರಮಾಣದ ದೇಶಿ- ವಿದೇಶಿ ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಉದ್ಯಮಿಗಳು ನೀಡಿದ ದೂರಿನ ಆಧಾರದಲ್ಲಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನ ಮನೆಯ ಅಡಗುದಾಣದಲ್ಲಿ ಬಂಧಿಸಿದ್ದಾರೆ. ಈ ವೇಳೆ ಆತನ ಐಷಾರಾಮಿ ಜೀವನಶೈಲಿಯನ್ನು ನೋಡಿ ಪೊಲೀಸರೇ ಆಶ್ಚರ್ಯಚಕಿತರಾಗಿದ್ದರು. ಮನೆಯಲ್ಲೇ ಬಾರ್‌ ಮಾಡಿಕೊಂಡು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947 ರು. ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ, 667 ಗ್ರಾಂ ಚಿನ್ನಭಾರಣ, ಅಂದಾಜು 2.75 ಕೋಟಿ ರು. ಮೌಲ್ಯದ ವಜ್ರದ ಉಂಗುರವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ವಂಚನೆ ಇತಿಹಾಸ:

ರೋಶನ್‌ ಸಲ್ಡಾನಾ ವಿರುದ್ಧ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿವೆ. ಹಣದ ಅವಶ್ಯಕತೆ ಇರುವ ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು. ನಗದು ಹಣವನ್ನು ಅವರಿಂದ ಪಡೆದುಕೊಳ್ಳುತ್ತಿದ್ದ. ಹಣ ಕೈಸೇರಿದ ಬಳಿಕ ಸಾಲ ನೀಡದೆ ವಂಚಿಸುತ್ತಿದ್ದ ಎಂದು ನಗರ ಪೊಲೀಸ್‌ ಆಯುಕ್ತ ಸುಧೀರ್‌ ರೆಡ್ಡಿ ತಿಳಿಸಿದ್ದಾರೆ.

ಆರೋಪಿಯ ವ್ಯವಹಾರಗಳನ್ನು ಪರಿಶೀಲಿಸಿದಾಗ ಕಳೆದ 3 ತಿಂಗಳಲ್ಲಿ ಈತ ಇತರರೊಂದಿಗೆ ಸೇರಿಕೊಂಡು ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೊಲ್ಕೊತ್ತಾ, ಸಾಂಗ್ಲಿ, ಲಕ್ನೋ, ಬಾಗಲಕೋಟೆ ಮತ್ತಿತರ ಕಡೆಯ ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ 32 ಕೋಟಿ ರು.ಗೂ ಅಧಿಕ ಹಣ ಪಡೆದು ವಂಚಿಸಿರುವುದು ಬಯಲಿಗೆ ಬಂದಿದೆ.

200 ಕೋಟಿ ರು.ಗೂ ಅಧಿಕ ವಂಚನೆ?:

ಕೇವಲ ಮೂರೇ ತಿಂಗಳಲ್ಲಿ 32 ಕೋಟಿ ರು. ಹಣ ಪಡೆದು ವಂಚಿಸಿರುವ ರೋಶನ್‌, ಅದಕ್ಕೂ ಮೊದಲು ಅನೇಕ ವರ್ಷಗಳಿಂದ ಈ ದಂಧೆಯನ್ನೇ ಕಸುಬನ್ನಾಗಿಸಿಕೊಂಡಿದ್ದರಿಂದ 200 ಕೋಟಿ ರು.ಗೂ ಅಧಿಕ ಹಣ ಪಡೆದು ವಂಚಿಸಿರುವುದಾಗಿ ಅಂದಾಜಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈತನೊಂದಿಗೆ ವಂಚನೆಯಲ್ಲಿ ಪಾಲ್ಗೊಂಡವರ ಪತ್ತೆಗೂ ಬಲೆ ಬೀಸಿದ್ದಾರೆ.

ಮೂಲತಃ ಬಜಾಲ್‌ ಬೊಲ್ಲಗುಡ್ಡ ನಿವಾಸಿಯಾಗಿರುವ ರೋಶನ್‌ ಸಲ್ಡಾನಾ ಇಲ್ಲಿಂದ ಮುಂಬೈಗೆ ತೆರಳಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. 8-10 ವರ್ಷಗಳ ಹಿಂದೆ ಹಣದಾಸೆಗೆ ಬಿದ್ದು ವಂಚನೆಯ ಕೆಲಸಕ್ಕೆ ಕೈಹಾಕಿದ್ದ. ಕ್ರಮೇಣ ವಂಚನೆ ಜಾಲವನ್ನು ವಿಸ್ತರಿಸಿಕೊಂಡು ರಾಜ್ಯ, ಹೊರರಾಜ್ಯ ಉದ್ಯಮಿಗಳ ಸಂಪರ್ಕ ಸಾಧಿಸಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ರಾಜ್ಯದ ಕೆಲವೆಡೆ ಈತ ಫೈನಾನ್ಸ್‌ ಕಚೇರಿಗಳನ್ನು ಹೊಂದಿರುವುದಾಗಿಯೂ ತಿಳಿದುಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಲೆಗೆ ಬಿದ್ದದ್ದು ಹೇಗೆ?:

ಮುಂಬೈ, ಚಿತ್ರದುರ್ಗದಲ್ಲಿ ಈತನ ದಂಧೆಯ ಬಗ್ಗೆ ಪ್ರಕರಣ ದಾಖಲಾಗಿದ್ದರೂ, ಮಂಗಳೂರಿನಲ್ಲಿ ಈತನ ವಂಚನೆ ಬಯಲಾಗಿರಲಿಲ್ಲ. ಇತ್ತೀಚೆಗೆ ಇಬ್ಬರು ಉದ್ಯಮಿಗಳು ಪೊಲೀಸರಿಗೆ ದೂರು ನೀಡಿ ತಮಗಾದ ಅನ್ಯಾಯ ಸರಿಪಡಿಸುವಂತೆ ಪೊಲೀಸರ ಮೊರೆ ಹೋಗಿದ್ದರು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಬಹುಕೋಟಿ ವಂಚನೆಯ ಸರಮಾಲೆಯೇ ಪತ್ತೆಯಾಗಿದೆ.

ಇದಕ್ಕೂ ಮೊದಲು 2023ರಲ್ಲಿ ಆಂಧ್ರಪ್ರದೇಶದ ಉದ್ಯಮಿಯೊಬ್ಬರಿಗೆ ಸಾಲದ ಅವಶ್ಯಕತೆ ಬಂದಿದ್ದು, ಅದಕ್ಕಾಗಿ ಬೆಂಗಳೂರಿನಲ್ಲಿ ಫೈನಾನ್ಸ್‌ ಕನ್ಸಲ್ಟೆನ್ಸಿ ಹೊಂದಿರುವ ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿದ್ದರು. ಈ ವ್ಯಕ್ತಿ ರೋಶನ್‌ ಸಲ್ಡಾನಾನನ್ನು ಉದ್ಯಮಿಗೆ ಪರಿಚಯಿಸಿ, ಆತನ ಫೈನಾನ್ಸ್‌ನಿಂದ ಸಾಲ ಕೊಡಿಸುವುದಾಗಿ ನಂಬಿಸಿದ್ದ. ಅದರಂತೆ ಚಿತ್ರದುರ್ಗದಲ್ಲಿ ರೋಶನ್‌ ಸಲ್ಡಾನಾನನ್ನು ಆ ಉದ್ಯಮಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಾಲ ಮಂಜೂರು ಮಾಡಿಕೊಡಲು 40 ಲಕ್ಷ ರು. ನಗದು ಪಡೆದಿದ್ದ ರೋಶನ್‌, 15 ದಿನಗಳಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಬಳಿಕ ನಾಪತ್ತೆಯಾಗಿದ್ದ. ವಂಚನೆಗೀಡಾದ ಉದ್ಯಮಿ ಚಿತ್ರದುರ್ಗ ನಗರ ಠಾಣೆಗೆ ದೂರು ನೀಡಿದ್ದರು.

ಆರೋಪಿ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 22/2025, ಕಲಂ: 316(2), 316(5), 318(2), 318(3) ಅಲ್ಲದೆ, 3(5) ಭಾರತೀಯ ನ್ಯಾಯ ಸಂಹಿತೆ ಹಾಗೂ ಅಪರಾಧ ಕ್ರಮಾಂಕ:30/2025, ಕಲಂ: 316(2), 316(5), 318(2), 318 (3), 61(2) ಜತೆಗೆ 3(5) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಮನೆ ಎಂಬ ರಹಸ್ಯ ಅಡಗುದಾಣ!

ಈ ರೋಶನ್‌ ಸಲ್ಡಾನಾ ಮಂಗಳೂರಿನ ಜನತೆಗೆ ಅಷ್ಟಾಗಿ ಪರಿಚಯ ಇಲ್ಲ. ಜಪ್ಪಿನಮೊಗರಿನಲ್ಲಿರುವ ಬೃಹತ್‌ ಮನೆಯನ್ನೇ ಅಡಗುದಾಣ ಮಾಡಿಕೊಂಡು ಇಲ್ಲಿಂದಲೇ ಬಹುತೇಕ ವ್ಯವಹಾರ ಕುದುರಿಸುತ್ತಿದ್ದ. ಈತನ ಮನೆಯಲ್ಲಿರುವ ಅಡಗುದಾಣ ಪತ್ತೆ ಹಚ್ಚಲು ಪೊಲೀಸರು ಹರಸಾಹಸಪಟ್ಟು, ಬಾಗಿಲುಗಳನ್ನು ಒಡೆದು ಒಳಪ್ರವೇಶಿಸಬೇಕಾಗಿತ್ತು!

ಮನೆಯ ಬೆಡ್‌ರೂಮ್‌ನಿಂದ ಅಡಗುದಾಣಕ್ಕೆ ಸಾಗಲು ವಾರ್ಡ್‌ರೋಬ್‌ನಂತೆ ಕಾಣುವ ಬಾಗಿಲುಗಳನ್ನು ಮಾಡಿಕೊಂಡಿದ್ದ. ಅಲ್ಲಿಂದ ಮೆಟ್ಟಿಲುಗಳನ್ನು ಅಳವಡಿಸಿ ಬಚ್ಚಿಟ್ಟುಕೊಳ್ಳಲು ಇನ್ನೊಂದು ರಹಸ್ಯ ಜಾಗ ಮಾಡಿಕೊಂಡಿದ್ದ. ಮನೆ ಸುತ್ತಲೂ, ಮನೆಯೊಳಗೂ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾಗಳಿವೆ. ಮನೆಗೆ ಪೊಲೀಸರು ಅಥವಾ ವಂಚನೆಗೆ ಒಳಗಾದ ಉದ್ಯಮಿಗಳು ಬರುವುದನ್ನು ಸಿಸಿಟಿವಿಯಲ್ಲೇ ವೀಕ್ಷಿಸಿ ಅಡಗುದಾಣಕ್ಕೆ ಹೋಗಿ ಬಚ್ಚಿಟ್ಟುಕೊಳ್ಳುತ್ತಿದ್ದ.

ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿದಾಗ ಈತನ ಮಲೇಷ್ಯಾ ಯುವತಿಯ ಜತೆ ಇದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಮನೆಯಲ್ಲೇ 7 ಸ್ಟಾರ್‌ ಮಾದರಿಯ ಬಾರ್‌ ಮಾಡಿಕೊಂಡಿದ್ದು, ಅಲ್ಲಿ ದೇಶಿ- ವಿದೇಶಿ ಹೈಲೆವೆಲ್‌ ಬ್ರ್ಯಾಂಡ್‌ಗಳನ್ನು ಮದ್ಯವನ್ನೂ ಇಟ್ಟುಕೊಂಡಿದ್ದ. ಬಂಗಾರದ ಬಣ್ಣದ ಸೋಫಾಗಳು, ಐಷಾರಾಮಿ ವಸ್ತುಗಳನ್ನು ಇಟ್ಟುಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ ಎನ್ನುವುದು ಪೊಲೀಸರ ಕಾರ್ಯಾಚರಣೆಯಿಂದ ಪತ್ತೆಯಾಗಿದೆ.