ಅಂತರ್ಜಲ ಅಬಿವೃದ್ಧಿ ಪಡಿಸುವ ಕಾಮಗಾರಿಗಳು ಸೇರಿವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಹಿಂದುಳಿದ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ 3 ಸಾವಿರ ಕೋಟಿ ರುಗಳ ಪ್ರಸ್ತಾವನೆ ಕಳುಹಿಸಿದ್ದು ,ಇದರಲ್ಲಿ ಜಿಲ್ಲೆಯ ಕೊರಟಗೆರೆ, ಮಧುಗಿರಿ,ಚಿಕ್ಕನಾಯಕನಹಳ್ಳಿ ತಾಲೂಕುಗಳ ನದಿಗಳಿಗೆ ಅಂತರ್ಜಲ ಅಬಿವೃದ್ಧಿ ಪಡಿಸುವ ಕಾಮಗಾರಿಗಳು ಸೇರಿವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.ಸಣ್ಣ ನೀರಾವರಿ ಮತ್ತು ಅಂತರ್ಜಲ ಅಬಿವೃದ್ಧಿ ಇಲಾಖೆ ,ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶನಿವಾರ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಮುದ್ದೇನಹಳ್ಳಿ -ಶಾನಗಾನಹಳ್ಳಿ ಗ್ರಾಮದ ನಡುವೆ ಜಯಮಂಗಲಿ ನದಿಗೆ ಅಡ್ಡಲಾಗಿ 18.50 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿ, ತಿಂಗಳೂರು -ಕಲಿದೇವಪುರ ನಡುವೆ ಕುಮದ್ವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ಕಂ ಬ್ರಿಡ್ಜ್ 8 ಕೋಟಿ. ಹಾಗೂ ದೊಡ್ಡೇರಿ ಹೋಬಳಿ ಜಕ್ಕೇನಹಳ್ಳಿ -ಶಂಕರಪುರ ನಡುವೆ ಸುವರ್ಣಮುಖಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಒಟ್ಟು 29.50 ಕೋಟಿ ರು. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೃಷಿ ಇಲ್ಲಿನ ಜನರ ಜೀವಾಳ, ಈಗಾಗಲೇ 178 ಕೋಟಿ ಅನುಮೋದನೆ ನೀಡಿದ್ದು ಜಿಲ್ಲೆಗೆ 30 ಕೋಟಿ, ಧಾರವಾಡ ಜಿಲ್ಲೆಯ 78 ಕೋಟಿ ಕಾಮಗಾರಿಗಳು ಪೂರ್ಣಗೊಳಿಸಲಾಗುತ್ತಿದೆ. ಕೊಡಿಗೇನಹಳ್ಳಿ ಹಡ್ಲು ಗ್ರಾಮಕ್ಕೆ ಚೆಕ್ ಡ್ಯಾಂ ಬ್ರಿಡ್ಜ್ ಗೆ 10 ಕೋಟಿ ಅಂದಾಜಿಸಲಾಗಿದೆ. ಎಸ್ಸಿ, ಎಸ್ಟಿ ಜನರಿಗೆ 12 ಸಾವಿರ ಬೋರ್ ವೆಲ್ ಕೊರೆಸಿ ಕೊಡಲಾಗಿದೆ. 1345 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದರು.ಶಾಸಕ ಕೆ.ಎನ್. ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶ, ಯಾವುದೇ ನೀರಾವರಿ ಯೋಜನೆಗಳಿಲ್ಲದೆ ವಂಚಿತವಾಗಿದೆ. ಕುಡಿವ ನೀರು ಮತ್ತು ಕೃಷಿಗೆ ನೀರಿನ ಅಭಾವ ಉಂಟಾದ ಕಾರಣ ಅಂತರ್ಜಲ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನನ್ನ ಕ್ಷೇತ್ರದ ನದಿಗಳಿಗೆ ಚೆಕ್ ಡ್ಯಾಂ ಕಾಲುವೇ ನಿರ್ಮಿಸಿ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ . ಈ ನದಿಗಳ ನೀರು ಆಂಧ್ರ ಪ್ರದೇಶಕ್ಕೆ ಸೇರುತ್ತವೆ. ಈ ನೀರನ್ನು ಅಡಗಟ್ಟಿ ನಮ್ಮ ಭಾಗದ ರೈತರಿಗೆ ಅಂತರ್ಜಲ ವೃದ್ಧಿಸುವುದಾಗಿದೆ. ಈ ಕಾಮಗಾರಿಗಳು ಸಂಸಂದ ವಿ.ಸೋಮಣ್ಣ,ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸಹಕಾರದಿಂದ ಪ್ರಾರಂಭವಾಗಿದ್ದು, ಮಾರ್ಚ್‌ಗೆ ಕಾಮಗಾರಿ ಮುಗಿಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಐಎಎಸ್ ಅಧಿಕಾರಿ ಬಿ.ಕೆ.ಪವಿತ್ರ, ಎಂಜಿನಿಯರ್ ಪ್ರಕಾಶ್ ಶ್ರೀಹರಿ,ಅಧೀಕ್ಷಕ ಗುರು ಕೆ. ಡಿಸಿ ಶುಭಕಲ್ಯಾಣ್, ಎಸಿ ಗೋಟೂರು ಶಿವಪ್ಪ ತಹಸೀಲ್ದಾರ್ ಶ್ರೀನಿವಾಸ್ , ಲಕ್ಷ್ಮಣ್, ಕಾರ್ಯಪಾಲಕ ಎಂಜಿನಿಯರ್ ಗಳಾದ ಸುರೇಶ್, ಎಂ.ತಿಪ್ಪೇಸ್ವಾಮಿ, ಮಂಜು ಕಿರಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆದಿ ರಾಯಣರೆಡ್ಡಿ, ಗೋಪಾಲಯ್ಯ ಮುಖಂಡರಾದ ಎನ್.ಗಂಗಣ್ಣ, ಎಂ.ಕೆ.ನಂಜುಂಡರಾಜು, ಸುವರ್ಣಮ್ಮ, ಇಂದಿರಾ, ಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷೆ ರಾಮಾಂಜಿನಮ್ಮ,ಲಲಿತಾಮ್ಮ, ಇತರರಿದ್ದರು.