ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ ದಂಡ ಅಥವಾ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.

ದಾವಣಗೆರೆ: ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ ದಂಡ ಅಥವಾ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.

ಪಿ.ಜೆ. ಬಡಾವಣೆಯ ಎವಿಕೆ ರಸ್ತೆಯ ಜುಡಿಯೊ (ತೋಶಾನಿ ಎಂಪೋರಿಯಂ ಅವೆನ್ಯೂ) ಮಳಿಗೆಯಲ್ಲಿ ಬಟ್ಟೆ ಖರೀದಿಸಿದ್ದ ದೂರುದಾರ ರಾಜೇಂದ್ರ ಎಂಬವರಿಂದ ಕ್ಯಾರಿ ಬ್ಯಾಗ್‌ಗಾಗಿ ಹೆಚ್ಚುವರಿಯಾಗಿ ₹10 ವಸೂಲಿ ಮಾಡಿದ್ದಕ್ಕಾಗಿ ಆಯೋಗವು ಈ ಆದೇಶ ಹೊರಡಿಸಿದೆ.

ಜುಡಿಯೊ ಮಳಿಗೆಯಲ್ಲಿ ಬಟ್ಟೆಗಳನ್ನು ಖರೀದಿಸಿದ ರಾಜೇಂದ್ರ ಅವರಿಂದ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ ₹10 ಶುಲ್ಕ ಪಡೆಯಲಾಗಿತ್ತು. ಇದರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಆಯೋಗವು, ಗ್ರಾಹಕರಿಂದ ಕ್ಯಾರಿ ಬ್ಯಾಗ್ ಶುಲ್ಕ ವಸೂಲಿ ಮಾಡುವುದು ಕಾನೂನುಬಾಹಿರ ಹಾಗೂ ಸೇವಾ ಲೋಪ ಎಂದು ಸ್ಪಷ್ಟಪಡಿಸಿದೆ.

ಸೇವೆಯಲ್ಲಾದ ನಿರ್ಲಕ್ಷ್ಯ, ಅನ್ಯಾಯದ ವ್ಯಾಪಾರ ಮತ್ತು ದೂರಿನ ಖರ್ಚು ಸೇರಿ ದೂರುದಾರರಿಗೆ ಒಟ್ಟು ₹10,000 ಪರಿಹಾರ ಹಾಗೂ ಪಾವತಿಸಿದ್ದ ₹10 ಹಿಂತಿರುಗಿಸುವಂತೆ ಜುಡಿಯೊ ಸಂಸ್ಥೆಗೆ ಆಯೋಗ ಆದೇಶಿಸಿದೆ. ಇದರೊಂದಿಗೆ ಗ್ರಾಹಕ ಕಾನೂನು ನೆರವು ಖಾತೆಗೆ ₹20,000 ಜಮಾ ಮಾಡಲು ಸಹ ಸೂಚಿಸಿದೆ. ಒಟ್ಟು ₹30,000 ಮೊತ್ತವನ್ನು ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಲು ಆದೇಶಿಸಲಾಗಿದೆ.

ಎಲ್ಲಾ ಮಳಿಗೆಗಳಿಗೂ ಆದೇಶ ಅನ್ವಯ:ಉತ್ಪನ್ನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್‌ಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಆದೇಶವು ಕೇವಲ ಸದರಿ ಮಳಿಗೆಗೆ ಮಾತ್ರವಲ್ಲದೆ ಎಲ್ಲಾ ಸಗಟು ವ್ಯಾಪಾರಿಗಳು, ರಿಟೇಲ್ ಮಾರಾಟಗಾರರು, ದೊಡ್ಡ ಮಾಲ್‌ಗಳು, ಮೋರ್, ರಿಲಯನ್ಸ್, ಟ್ರೆಂಡ್ಸ್ ಹಾಗೂ ಇನ್ನಿತರ ಎಲ್ಲಾ ಮಾರಾಟ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಆಯೋಗ ತಿಳಿಸಿದೆ.

ಈ ಆದೇಶವನ್ನು ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ, ಸದಸ್ಯ ಸಿ.ಎಸ್. ತ್ಯಾಗರಾಜನ್ ಅವರನ್ನು ಒಳಗೊಂಡ ಪೀಠವು ಹೊರಡಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.