ಕಡಲ್ಕೊರೆತ ತಡೆಗೆ 300 ಕೋಟಿ ರು. ಯೋಜನೆ: ಕೃಷ್ಣ ಭೈರೇಗೌಡ

| Published : Jul 31 2025, 12:53 AM IST

ಸಾರಾಂಶ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿ ಕಡಲ್ಕೊರೆತವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ವೀಕ್ಷಿಸಿದರು.

ಕನ್ನಡ ಪ್ರಭ ವಾರ್ತೆ ಉಡುಪಿಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಭವಿಸುವ ಭೂಕುಸಿತ ತಡೆಗೆ 500 ಕೋಟಿ ರುಪಾಯಿ ಮತ್ತು ಕಡಲ್ಕೊರೆತ ತಡೆಗೆ 300 ಕೋಟಿ ರುಪಾಯಿಗಳ ಶಾಶ್ವತ ಪರಿಹಾರ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.ಅವರು ಬುಧವಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿ ಕಡಲ್ಕೊರೆತವನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಕಡಲ್ಕೊರೆತದ ಬಗ್ಗೆ ಮದ್ರಾಸು ಐಐಟಿ ತಜ್ಞರಿಂದ ವರದಿ ಪಡೆಯಲಾಗಿದೆ. ಈ ವರದಿ ಪ್ರಕಾರ ಪ್ರತಿ 100 ಮೀಟರ್ ಕಡಲ್ಕೊರೆತವನ್ನು ಶಾಶ್ವತವಾಗಿ ತಡೆಯುವುದಕ್ಕೆ 15 ಕೋಟಿ ರು. ವೆಚ್ಚವಾಗುತ್ತದೆ. ಅದರಂತೆ ಕರಾವಳಿಯ ಮೂರು ಜಿಲ್ಲೆಗಳಿಗೆ ಕಡಲ್ಕೊರೆತ ತಡೆಯಲು 100 ಕೋಟಿ ರು.ಗಳಂತೆ 300 ಕೋಟಿ ರು.ಗಳನ್ನು ಈ ಯೋಜನೆ ಅಡಿ ಮೀಸಲಿಡಲಾಗುತ್ತದೆ. ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಕಳೆದ ಮೂರು-ನಾಲ್ಕು ವರ್ಷಗಳಿಂದ ಮಲೆನಾಡು ಮತ್ತು ಕರಾವಳಿಯ 6 ಜಿಲ್ಲೆಗಳಲ್ಲಿ ಭೂ ಕುಸಿತ, ಗುಡ್ಡೆ ಕುಸಿತದ ಘಟನೆಗಳು ಸಂಭವಿಸುತ್ತಿದ್ದು, ಆಸ್ತಿಪಾಸ್ತಿ ಪ್ರಾಣಹಾನಿಗಳಾಗಿವೆ. ಇದರ ಪರಿಹಾರಕ್ಕೆ 500 ಕೋಟಿ ರು.ಗಳ ಯೋಜನೆಯೊಂದನ್ನು ರೂಪಿಸಲಾಗಿದೆ. ಇದು ದೀರ್ಘಾವಧಿಯ ಆದರೆ ಶಾಶ್ವತ ಪರಿಹಾರ ಯೋಜನೆಯಾಗಿದೆ ಎಂದು ಸಚಿವರು ತಿಳಿಸಿದರು.ಈ ಯೋಜನೆಯಡಿ ಉಡುಪಿ ಜಿಲ್ಲೆಗೆ 50 ಕೋಟಿ ರು.ಗಳನ್ನು ನೀಡಲುದ್ದೇಶಿಸಿದ್ದು, ಜಿಲ್ಲೆಯಲ್ಲಿ ಭೂಕುಸಿತದ ಪ್ರದೇಶಗಳ ಬಗ್ಗೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಸರ್ವೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ವರದಿಯನ್ನು ಪಡೆಯಲಾಗುತ್ತದೆ ಎಂದರು.ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಹಾಯಕ ಆಯುಕ್ತೆ ರಶ್ಮಿ, ಕಾಪು ತಹಸೀಲ್ದಾರ್ ಪ್ರತಿಭಾ ಆರ್., ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮುಂತಾದವರಿದ್ದರು.