ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಎಲ್ಲ ಪಂಗಡಗಳ 110 ಐನ್ ಮನೆಗಳ ಅಭಿವೃದ್ಧಿಗಾಗಿ 4.50 ಕೋಟಿ ರು. ಮೀಸಲಿರಿಸಲಾಗಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಕೊಡಗು ಗೌಡ ಹಿತರಕ್ಷಣಾ ಸಮಿತಿ ವತಿಯಿಂದ ಇಲ್ಲಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೊಡಗಿನಲ್ಲಿ ಕೊಡವರು, ಕೊಡವ ಭಾಷಿಕ ಮೂಲ ನಿವಾಸಿಗಳು, ಅರೆಭಾಷಿಕ ಗೌಡ ಜನಾಂಗ ಸೇರಿದಂತೆ ಹಲವು ಸಮುದಾಯದವರು ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿನ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನೂ ಉಳಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೊಡಗಿನ ಎಲ್ಲ ಪಂಗಡಗಳ 110 ಐನ್ ಮನೆಗಳ ಅಭಿವೃದ್ಧಿಗಾಗಿ 4.50 ಕೋಟಿ ರೂ. ಮೀಸಲಿರಿಸಲಾಗಿದೆ. ಅರೆಭಾಷಿಕ ಗೌಡ ಸಮಾಜದ ಸುಮಾರು 30 ಐನ್ ಮನೆಗಳೂ ಇದರಲ್ಲಿ ಸೇರಿವೆ.

ಕೊಡಗು ಗೌಡ ಸಮಾಜಕ್ಕೆ ಮಡಿಕೇರಿ ಸಮೀಪದಲ್ಲಿ 6 ಎಕರೆ ಜಾಗ ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. ಇನ್ನೂ ಹೆಚ್ಚಿನ ಜಾಗ ಕೊಡಿಸಲು ಪ್ರಯತ್ನ ನಡೆಸಲಾಗುವುದು. ಭಾಗಮಂಡಲ ಗೌಡ ಸಮಾಜ ಕಟ್ಟಡಕ್ಕೆ 1 ಕೋಟಿ ರು. ಹಣ ಸರ್ಕಾರದಿಂದ ಮಂಜೂರಾಗಿದ್ದು, ಇನ್ನಷ್ಟೇ ಬಿಡುಗಡೆ ಆಗಬೇಕಿದೆ ಎಂದು ಹೇಳಿದರು.


ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಎಲ್ಲರ ಅವಿರತ ಶ್ರಮದ ಫಲವಾಗಿ ಕೊಡಗು ಗೌಡ ಸಮಾಜಕ್ಕೆ ಸರ್ಕಾರದಿಂದ ಜಮೀನು ಸಿಕ್ಕಿದೆ. ಈ ಜಾಗ ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಲಿ ಎಂದರು.

ಹಾಸನ ಜಿಲ್ಲೆ ಅಬಕಾರಿ ಉಪ ನಿರೀಕ್ಷಕಿ ನಂಗಾರು ಸುಮಿತ್ರ ನಿಂಗರಾಜು ಮಾತನಾಡಿ, ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿಕೊಳ್ಳುವುದರ ಹಿಂದಿನ ಶ್ರಮ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ಕೊಡಗು ಗೌಡ ಸಮಾಜಕ್ಕೆ ಜಾಗ ಕೊಡಿಸುವಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಶ್ರಮ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪರ್ಮಾಲೆ ಗಣೇಶ್ ಮಾತನಾಡಿ, ಕೊಡಗಿನ ಎಲ್ಲ ತಾಲೂಕುಗಳಲ್ಲೂ ಗೌಡ ಸಮಾಜದ ಕಟ್ಟಡಗಳಿವೆ. ಪೊನ್ನಂಪೇಟೆ ತಾಲೂಕಿಗೂ ಗೌಡ ಸಮಾಜದ ಅಗತ್ಯವಿದ್ದು, ಇದಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಡಿಕೇರಿ ಗೌಡ ಸಮಾಜ ಅಧ್ಯಕ್ಷ ದಂಬೆಕೋಡಿ ಆನಂದ ಮಾತನಾಡಿದರು. ಕೊಡಗು ಗೌಡ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಸುರೇಶ್ ಸಂಪಾಜೆ ಅಮೆಮನೆ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಸಮಿತಿ ನಿರ್ದೇಶಕರಾದ ಪರಿಚನ ಸತೀಶ್, ಕೆದಂಬಾಡಿ ಕಾಂಚನ ಗೌಡ, ಪಟ್ಟಡ ದೀಪಕ್ ಪ್ರಭಾಕರ, ಬಾಳಾಡಿ ಶ್ರೇಯಾ ಪ್ರತಾಪ್ ಮತ್ತಿತರರಿದ್ದರು.

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಕೊಡಗು ಗೌಡ ಹಿತರಕ್ಷಣಾ ಸಮಿತಿ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಇದೇ ವೇಳೆ ಸಾಹಿತ್ಯ ಕ್ಷೇತ್ರದ ಸಾಧಕರಾದ ಪೂಜಾರೀರ ಕೃಪಾ ದೇವರಾಜ್, ಡಾ. ಸೂರ್ಯಕುಮಾರ್, ಸಮಾಜ ಸೇವೆಗಾಗಿ ಕೋಳಿಬೈಲು ಜನಾರ್ದನ, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ದೇವವೃತ ಭೀಷ್ಮ ದಂಬೆಕೋಡಿ, ಕೃಷಿ ಕೇತ್ರದಲ್ಲಿನ ಸಾಧನೆಗಾಗಿ ರಾಮಣ್ಣ ಹಾಗೂ ಯುವಜನ ಕ್ಷೇತ್ರದಲ್ಲಿನ ಸಾಧನೆಗಾಗಿ ಬಾಳಾಡಿ ದಿಲೀಪ್ ಕುಮಾರ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಯಾವುದೇ ಸಮುದಾಯ ಆದರೂ ಸಮುದಾಯದೊಳಗೆ ಒಗ್ಗಟ್ಟು ಇರಬೇಕು. ಮಗು ಅತ್ತರೆ ಮಾತ್ರ ಹಾಲು ಎನ್ನುವಂತೆ ಸಮಾಜ ಒಗ್ಗಟ್ಟಾಗಿ ನಿಂತು ಸರ್ಕಾರದ ಮುಂದೆ ಬೇಡಿಕೆ ಇಟ್ಟಾಗ ಆ ಬೇಡಿಕೆ ಈಡೇರುತ್ತದೆ. ಅರೆಭಾಷಿಕ ಗೌಡ ಜನಾಂಗದಲ್ಲೂ ಈ ಒಗ್ಗಟ್ಟು ಇರಲಿ.

-ಪ್ರಸನ್ನ ಎಡಿಕೇರಿ ಉದ್ಯಮಿ