ರಾಜ್ಯದಲ್ಲಿ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಸಂಕಷ್ಟದಲ್ಲಿರುವ ಕಲಾವಿದರ ಜೀವನ ಭದ್ರತೆಗಾಗಿ ಪ್ರತಿ ತಿಂಗಳು ₹5 ಸಾವಿರ ಮಾಸಾಶನ ನೀಡಲು ನಾವು ಸಿದ್ಧರಿದ್ದೇವೆ ಎಂದು ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಭರವಸೆ ನೀಡಿದ್ದಾರೆ.

- ​ಜಗಳೂರು ಬಯಲು ರಂಗಮಂದಿರದಲ್ಲಿ ರಾಜ್ಯ ಕಲಾವಿದರ ಸಾಂಸ್ಕೃತಿಕ ಶಕ್ತಿ ಸಮಾವೇಶ

- - -

ಜಗಳೂರು: ರಾಜ್ಯದಲ್ಲಿ ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಸಂಕಷ್ಟದಲ್ಲಿರುವ ಕಲಾವಿದರ ಜೀವನ ಭದ್ರತೆಗಾಗಿ ಪ್ರತಿ ತಿಂಗಳು ₹5 ಸಾವಿರ ಮಾಸಾಶನ ನೀಡಲು ನಾವು ಸಿದ್ಧರಿದ್ದೇವೆ ಎಂದು ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಭರವಸೆ ನೀಡಿದರು.

​ಪಟ್ಟಣದ ಬಯಲು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಕಲಾವಿದರ ಬೃಹತ್ ಸಾಂಸ್ಕೃತಿಕ ಶಕ್ತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಜಿಲ್ಲೆಗೂ ತನ್ನದೇ ಆದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ. ಕಲೆಯ ಉಳಿವಿಗಾಗಿ ಯಾವುದೇ ಸರ್ಕಾರ ಬಂದರೂ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು.

ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಕಲಾವಿದರಿದ್ದು, ಸಂಘಟಿತ ಹೋರಾಟದ ಮೂಲಕ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ. ರಂಗಭೂಮಿ ಉಳಿವಿಗಾಗಿ ಶ್ರಮಿಸಿದ ಮಹಾನ್ ಚೇತನ ಗುಬ್ಬಿ ವೀರಣ್ಣನವರ ಮಾದರಿಯಲ್ಲೇ ವೀರೇಶ್ ಪ್ರಸಾದ್ ಕಲಾವಿದರ ಪರವಾಗಿ ದೊಡ್ಡ ಮಟ್ಟದ ಹೋರಾಟ ರೂಪಿಸುತ್ತಿದ್ದಾರೆ. ಅವರ ಬದ್ಧತೆ ಗುರುತಿಸಿಯೇ ಪಕ್ಷದ ಸಾಂಸ್ಕೃತಿಕ ಘಟಕದ ಜವಾಬ್ದಾರಿ ನೀಡಲಾಗಿದೆ ಎಂದು ಶ್ಲಾಘಿಸಿದರು.

​ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ, ಕೆ.ಪಿ.ಪಾಲಯ್ಯ ಮಾತನಾಡಿ, ಗ್ರಾಮೀಣ ಕಲಾವಿದರ ಸ್ಥಿತಿ ಅತ್ಯಂತ ಶೋಷಣೀಯವಾಗಿದೆ. ಅರ್ಹ ಬಡ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿಲ್ಲ. ಕಲಾವಿದರು ಒಗ್ಗಟ್ಟಿನಿಂದ ತಮ್ಮ ಹಕ್ಕುಗಳಿಗಾಗಿ ಪ್ರತಿ ತಾಲೂಕಿನ ಶಾಸಕರ ಮನೆ ಮುಂದೆ ಹಾಗೂ ವಿಧಾನಸೌಧದ ಮುಂದೆ ಬಲವಾದ ಪ್ರತಿಭಟನೆ ನಡೆಸಿ ನ್ಯಾಯ ಕೇಳಬೇಕು ಎಂದು ತಿಳಿಸಿದರು.

ಹಣ ಮೀಸಲಿಡಿ:

ಕಲಾವಿದರ ಸಂಘದ ರಾಜ್ಯಾಧ್ಯಕ್ಷ ರಾ. ವೀರೇಶ್ ಪ್ರಸಾದ್ (ಗುಬ್ಬಿ ವೀರಣ್ಣ) ಮಾತನಾಡಿ, ರಾಜ್ಯದಲ್ಲಿರುವ 50 ಲಕ್ಷ ಕಲಾವಿದರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರಗಳು ಬಜೆಟ್‌ನಲ್ಲಿ ಕನಿಷ್ಠ ರೂ. 5 ಸಾವಿರ ಹಣ ಮೀಸಲಿಡಬೇಕು ಎಂದು ಆಗ್ರಹಿಸಿದರು.

​ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸಪೇಟೆಯ ಇಷ್ಟಗೇರಿ ಮಠದ ಮಾತೃಶ್ರೀ ಅನುರಾಧೇಶ್ವರಿ ಅಮ್ಮನವರು ವಹಿಸಿದ್ದರು. ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಹಾಗೂ ಮುಖಂಡ ರಾಜೂ ಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ರಂಗಭೂಮಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

​ಸಮಾವೇಶದಲ್ಲಿ ಮುಖಂಡರಾದ ನಾಗೇಂದ್ರ ರೆಡ್ಡಿ, ಕುಮಾರ್ ಡಿ., ಸುಮಾ ಡಿ., ಸಂತೋಷ್ ಕುಮಾರ್ ಅರಿಶಿಣಗುಂಡಿ, ಡಿ.ಕೆಂಪಣ್ಣ, ವೃಷಭೇಂದ್ರ, ಬಸವರಾಜ್, ಭಾರತಿ, ಟಿ.ಭರತೇಶ, ಶಾರದಮ್ಮ, ಸಂದೀಪ್ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಕಲಾವಿದರು ಭಾಗವಹಿಸಿದ್ದರು.

- - -

(ಟಾಪ್ ಕೋಟ್‌) ನಮ್ಮ ತಂದೆ ಶಾಸಕ ಬಿ. ದೇವೇಂದ್ರಪ್ಪ ಅವರು ನೂರಕ್ಕೂ ಹೆಚ್ಚು ನಾಟಕಗಳನ್ನು ಆಡಿದ ಹವ್ಯಾಸಿ ಕಲಾವಿದರಾಗಿದ್ದಾರೆ. ಅಂದು ರಾಜಾಶ್ರಯದಲ್ಲಿದ್ದ ಕಲಾವಿದರಿಗೆ ಇಂದು ರಾಜಕಾರಣಿಗಳ ಆಶ್ರಯದ ಅಗತ್ಯವಿದೆ.

- ಎಂ.ಡಿ. ಕೀರ್ತಿಕುಮಾರ್, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಎಸ್‌ಟಿ ಘಟಕ.

- - -

-30ಜೆಎಲ್‌ಆರ್ ಚಿತ್ರ1ಎ:

ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದಿಂದ ಕಲಾವಿದರ ಶಕ್ತಿ ಸಮಾವೇಶ ನಡೆಯಿತು.