ನಗರ ಅಭಿವೃದ್ಧಿಗೆ ₹50 ಕೋಟಿ ಬಿಡುಗಡೆ: ಎಸ್ಸೆಸ್ಸೆಂ

| Published : Aug 31 2025, 01:08 AM IST

ನಗರ ಅಭಿವೃದ್ಧಿಗೆ ₹50 ಕೋಟಿ ಬಿಡುಗಡೆ: ಎಸ್ಸೆಸ್ಸೆಂ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯಲ್ಲಿ ಶುಕ್ರವಾರ ಸಂಜೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.

- ಇಂದಿರಾ ಕ್ಯಾಂಟೀನ್, ಬೀದಿದೀಪಗಳ ಉದ್ಘಾಟನೆ । ₹11 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆಯಲ್ಲಿ ಶುಕ್ರವಾರ ಸಂಜೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.

ಇಲ್ಲಿನ ಪಿ.ಬಿ. ರಸ್ತೆಯ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್, ವಿನೋಬ ನಗರದ 1ನೇ ಮುಖ್ಯ ರಸ್ತೆಯ ಬೀದಿದೀಪಗಳ ಉದ್ಘಾಟನೆ ಹಾಗೂ ₹11 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಅನಂತರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಾಜಿ ಮೇಯರ್‌ಗಳ ಭಾವಚಿತ್ರಗಳ ಅನಾವರಣ ಮತ್ತು 2025-26ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿ ಹಾಗೂ ಎಸ್ಸಿಎಸ್ಪಿ, ಟಿಎಸ್ಪಿ, ಪಾಲಿಕೆಯ ಸಾಮಾನ್ಯ ನಿಧಿಯ ಅನುದಾನದಡಿಯಲ್ಲಿ ₹14 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ನಗರದ ಅಭಿವೃದ್ಧಿಗೆ ಇದೀಗ ₹50 ಕೋಟಿ ಅನುದಾನ ಬಿಡುಗಡೆಯಾಗಿದೆ. ವಿವಿಧ ಕಾಮಗಾರಿಗಳು ಆರಂಭವಾಗಲಿವೆ. ₹50 ಕೋಟಿ ಅನುದಾನದಲ್ಲಿ ಹದಡಿ ರಸ್ತೆ, ನಗರದ ವೃತ್ತಗಳು, ನಗರ ಪಾಲಿಕೆ ಮುಂಭಾಗದಿಂದ ಗಾಂಧಿ ವೃತ್ತದವರೆಗೂ ಹೊಸದಾಗಿ ಒಳ್ಳೆಯ ಸಿಮೆಂಟ್ ರಸ್ತೆ ನಿರ್ಮಾಣ ಹಾಗೂ ಸೈಡ್ ಸ್ಟೋನ್ ಹಾಕುವ ಕೆಲಸ ಶೀಘ್ರವೇ ಆರಂಭಿಸಿ ಎಂದು ಸೂಚಿಸಿದರು.

ಪಾಲಿಕೆಗೆ ತೆರಿಗೆ ರೂಪದಲ್ಲಿ ಸಾಕಷ್ಟು ಹಣ ಬರುತ್ತಿದೆ. ಈ ಹಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಒಳ್ಳೆಯ ಕೆಲಸ ಮಾಡಿದರೆ ಊರು ಸ್ವಚ್ಛವಾಗಿರುತ್ತೆ. ಊರು ಹೆಚ್ಚು ಬೆಳೆಯುತ್ತಿದೆ. ಹಳೆ ಭಾಗ ಕೂಡ ಹೆಚ್ಚು ಅಭಿವೃದ್ಧಿ ಆಗಬೇಕಿದೆ ಎಂದು ತಿಳಿಸಿದರು.

ಮಾಜಿ ಮೇಯರ್ ಕೆ.ಚಮನ್ ಸಾಬ್ ಬಂದು ಎಲ್ಲ ಪಾಲಿಕೆ ಮೇಯರ್‌ಗಳ ಫೋಟೋ ಅನಾವರಣ ಮಾಡಬೇಕು ಎಂದು ತಿಳಿಸಿದರು. ಆಗ ಪಕ್ಷಾತೀತವಾಗಿ ಎಲ್ಲರ ಮೇಯರ್‌ಗಳ ಭಾವಚಿತ್ರಗಳನ್ನು ಅನಾವರಣ ಮಾಡಲಾಗಿದೆ. ಮುಂದಿನ ಪೀಳಿಗೆಗೆ ಇದು ಗೊತ್ತಾಗುವಂತೆ ಮಾಡಲಾಗಿದೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ಮೇಯರ್ ಆದ ಎಲ್ಲರ ಫೋಟೋಗಳೂ ಇಲ್ಲಿ ಇವೆ ಎಂದರು.

ಜಿಎಂಐಟಿಯಲ್ಲಿ ಕೂತರೆ ಅವಾರ್ಡ್‌ ಬರುತ್ತಾ?:

ನಮ್ಮ ಅವಧಿಯಲ್ಲಿ ಒಳ್ಳೆಯ ಕೆಲಸಗಳಾಗಿವೆ. ಮಹಾನಗರ ಪಾಲಿಕೆಗೆ ಮೊನ್ನೆ ಕೇಂದ್ರದ ಅವಾರ್ಡ್ ಬಂದಿದೆ. ಇದು ಹಂಗೇ ಬರುತ್ತಾ? ಸುಮ್ಮನೆ ಮನೆಯಲ್ಲಿ ಕೂತರೆ ಬರುತ್ತಾ? ಜಿಎಂಐಟಿಯಲ್ಲಿ ಕೂತರೆ ಬರುತ್ತಾ? ಸ್ಮಾರ್ಟ್ ಸಿಟಿ ಹಾಗೇ ಬಂತಾ? ನಮ್ಮವರೆಲ್ಲರೂ ಒಳ್ಳೆಯ ಕೆಲಸ ಮಾಡಿದ್ದಕ್ಕೆ ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಯಿತು. ಹಾಗಾಗಿ, ದಾವಣಗೆರೆ ನಗರ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಇನ್ನೂ ಹೆಚ್ಚು ಕೆಲಸಗಳಾಗಬೇಕು, ಮುಖ್ಯವಾಗಿ ರಸ್ತೆಗಳು ಈಗಾಗಲೇ ಆಗಿವೆ. ಒಳಗಿನ ರಸ್ತೆಗಳು ಆಗಬೇಕಿದೆ. ಹೊಸ ಬಡಾವಣೆಗಳಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕು. ಇದಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್‌ಗಳಾದ ಎಂ.ಎಸ್. ವಿಠ್ಠಲ್, ಕೆ.ಆರ್.ವಸಂತಕುಮಾರ, ಎಚ್.ಬಿ. ಗೋಣೆಪ್ಪ, ಕೆ,ಚಮನ್ ಸಾಬ್, ಎಚ್.ಎನ್, ಗುರುನಾಥ್, ರೇಣುಕಾಬಾಯಿ, ರೇಖಾ ನಾಗರಾಜ್, ವಿನಾಯಕ್ ಪೈಲ್ವಾನ್, ಅಶ್ವಿನಿ ವೇದಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

- - -

(ಬಾಕ್ಸ್‌) * ನೀವು ಯಾವ ಕೆಲಸ ಮಾಡಿದ್ದೀರಿ ತೋರಿಸಿ ಇದಕ್ಕೂ ಮುನ್ನ ಬಿಜೆಪಿಯ ಮಾಜಿ ಮೇಯರ್ ವಸಂತ್ ಕುಮಾರ್ ಮಾತನಾಡಿ, ಎಸ್.ಎಸ್. ಮಲ್ಲಿಕಾರ್ಜುನ್ ಕಳೆದ ಬಾರಿ ಸಚಿವರಾಗಿದ್ದಾಗ ಮಾಡಿದ್ದಷ್ಟು ಅಭಿವೃದ್ಧಿ ಕಾಮಗಾರಿಗಳು ಈ ಅವಧಿಯಲ್ಲಿ ನಡೆದಿಲ್ಲ ಎಂದಿದ್ದರು. ಅವರ ಮಾತಿಗೆ ತಿರುಗೇಟು ನೀಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ನೀವು ಯಾವ ಕೆಲಸ ಮಾಡಿದ್ದೀರಿ ತೋರಿಸಿ ನೋಡೋಣ? 10 ವರ್ಷದಲ್ಲಿ ಆಗಬೇಕಾದ ಕೆಲಸ 50 ವರ್ಷ ಹಿಡಿದಿವೆ. ಈ ಹಿಂದೆ ನಾವು ಮಂತ್ರಿ ಆಗಿದ್ದಾಗ ನೀರು, ರಸ್ತೆ ಇವೆಲ್ಲವೂ ಆಗಿದ್ದವು. ಇದಾದ ಮೇಲೆ ಒಂದು ಲೋಡು ಮಣ್ಣು ಸಹ ಹಾಕಿಲ್ಲ ನೀವು ಎಂದರು. ಅಂದು ಮಾಡಿದ ಗುಣಮಟ್ಟದ ರಸ್ತೆಗಳಿಂದಾಗಿ ಇಂದು ಮಹಾನಗರ ಪಾಲಿಕೆಗೆ ಹೊರೆ ಕಡಿಮೆಯಾಗಿದೆ. ರಾಜ್ಯದ ಇತರೆ ನಗರಗಳಿಗೆ ಹೋಲಿಕೆ ಮಾಡಿದರೆ ದಾವಣಗೆರೆ ಸ್ವಚ್ಛವಾಗಿದೆ. ಈ ಬಾರಿ ಸಾಕಷ್ಟು ಮಳೆಯಾದರೂ ಅಂತಹ ತೊಂದರೆಯಾಗಿಲ್ಲ. ಒಳಚರಂಡಿ ಮತ್ತು ರಸ್ತೆಗಳು ಪಕ್ಕಾ ಇರುವುದರಿಂದ ಸಮಸ್ಯೆಯಾಗಿಲ್ಲ ಎಂದರು. ನಗರಲ್ಲಿ ಬರೀ ಡಾಂಬರ್ ರಸ್ತೆಗಳೇ ಇದ್ದಿದ್ದರೆ ಆಟೋದವರು ಇತರೆ ವಾಹನ ಸವಾರರು ಏನಾಗಬೇಕಿತ್ತು? ಸಿಕ್ಕಾಪಟ್ಟೆ ಗುಂಡಿಗಳು ಬೀಳುತ್ತಿದ್ದವು. ಇಂದು ಅಂಥ ಯಾವುದು ಆಗುತ್ತಿಲ್ಲ. ಸಾಕಷ್ಟು ಗುಣಮಟ್ಟದ ಕೆಲಸಗಳಾಗಿವೆ. ಮಧ್ಯದಲ್ಲಿ ನಿಮ್ಮ (ಬಿಜೆಪಿ) ಸರ್ಕಾರದಲ್ಲಿ ಅನುದಾನ ಬಂತು. ಆದರೆ ಸರಿಯಾಗಿ ಕಾಮಗಾರಿಗಳ ಆಗಲಿಲ್ಲ. ಆಗ ಸರಿಯಾಗಿ ಕಾಮಗಾರಿಗಳ ನಡೆದಿದ್ದರೆ ನಗರ ಇನ್ನೂ ಸುಂದರವಾಗಿ ಇರುತಿತ್ತು. ಈಗ ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಸಚಿವರು ತಿರುಗೇಟು ನೀಡಿದರು.

- - -

-30ಕೆಡಿವಿಜಿ42:

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಾಜಿ ಮೇಯರ್ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸನ್ಮಾನಿಸಿದರು. -30ಕೆಡಿವಿಜಿ43:

ದಾವಣಗೆರೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ತಿಂಡಿ ಸವಿದರು. ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಮಾಜಿ ಮೇಯರ್ ಕೆ.ಚಮನ್ ಸಾಬ್, ಮಾಜಿ ಸದಸ್ಯ ಎ.ನಾಗರಾಜ ಇತರರು ಇದ್ದರು.