ಪೌರಾದೇವಿ ಶಕ್ತಿಪೀಠ ಅಭಿವೃದ್ಧಿಗೆ ₹೫೧೯ ಕೋಟಿ ಅನುದಾನ: ಸಂಸದ

| Published : Mar 08 2024, 01:50 AM IST

ಪೌರಾದೇವಿ ಶಕ್ತಿಪೀಠ ಅಭಿವೃದ್ಧಿಗೆ ₹೫೧೯ ಕೋಟಿ ಅನುದಾನ: ಸಂಸದ
Share this Article
  • FB
  • TW
  • Linkdin
  • Email

ಸಾರಾಂಶ

ಬಂಜಾರ ಸಮಾಜದ ಪುಣ್ಯಕ್ಷೇತ್ರ ಮಹಾರಾಷ್ಟ್ರದ ಪೌರಾದೇವಿ ಶಕ್ತಿಪೀಠ ಅಭಿವೃದ್ಧಿಗಾಗಿ ರು.೫೧೯ ಕೋಟಿ ಅನುದಾನ: ಕಲಬುರಗಿ ಸಂಸದ ಡಾ.ಉಮೇಶ ಜಾಧವ್

ಕನ್ನಡಪ್ರಭ ವಾರ್ತೆ ಚಿಂಚೋಳಿ

ದೇಶದ ಬಂಜಾರ ಸಮಾಜದ ಧರ್ಮಗುರು ರಾಮರಾವ ಮಹಾರಾಜರ ಮಹಾದಾಸೆಯಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿವರು ಬಂಜಾರ ಸಮಾಜದ ಪುಣ್ಯಕ್ಷೇತ್ರ ಮಹಾರಾಷ್ಟ್ರದ ಪೌರಾದೇವಿ ಶಕ್ತಿಪೀಠ ಅಭಿವೃದ್ಧಿಗಾಗಿ ₹೫೧೯ ಕೋಟಿ ಅನುದಾನ ನೀಡಿದ್ದಾರೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಹೇಳಿದರು.

ಪಟ್ಟಣದಲ್ಲಿ ತಾಲೂಕು ಬಂಜಾರ ಸಮಾಜದ ವತಿಯಿಂದ ಏರ್ಪಡಿಸಿದ್ದ ಸಂತಸೇವಾಲಾಲ್ ಮಹಾರಾಜರ ೨೮೫ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.

ರಾಮರಾವ ಮಹಾರಾಜರ ಆಸೆಯಂತೆ ಇಡೀ ಬಂಜಾರ ಸಮಾಜದವರು ಒಗ್ಗೂಡಿ ದೆಹಲಿಯಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಿ ಸೇವಾಲಾಲ್ ಧ್ವಜವನ್ನು ಹಾರಿಸಲಾಗಿದೆ. ದೇಶದಲ್ಲಿ ನಮ್ಮ ವೇಷಭೂಷಣಗಳಿಂದ ನಮಗೆ ಗುರುತಿಸುತ್ತಾರೆ. ನಿಮ್ಮ ಆಶೀರ್ವಾದದಿಂದ ಚಿಂಚೋಳಿ ಶಾಸಕನಾಗಿ ಮತ್ತು ಕಲಬುರಗಿ ಲೋಕಸಭೆ ಸದಸ್ಯನಾಗಿ ಚುನಾಯಿತನಾಗಿದ್ದೇನೆ. ಕಲಬುರಗಿ ಲೋಕಸಭಾ ಮತಕ್ಷೇತ್ರಕ್ಕೆ ಟಿಕೆಟ್‌ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಲಂಬಾಣಿಗರಿಗೆ ಟಿಕೆಟ್‌ ನೀಡಬೇಕಾ ಇಲ್ಲ ಎಂಬುದು ಗಂಭೀರವಾದ ಚರ್ಚೆ ನಡೆಯುತ್ತಿದೆ. ಆದರೆ ನನಗೆ ಕಲಬುರಗಿ ಲೋಕಸಭೆ ಮತಕ್ಷೇತ್ರದ ಅಭ್ಯರ್ಥಿಯಾಗಿ ಮತ್ತೆ ಚುನಾವಣೆ ಕಣಕ್ಕೆ ಸ್ಪರ್ಧಿಸುತ್ತೇನೆ ನನಗೆ ಟಿಕೆಟ್‌ ಸಿಗಲಿದೆ ಎಂದು ಹೇಳಿದ್ದಾರೆ.

ಶಾಸಕ ಡಾ.ಅವಿನಾಶ ಜಾಧವ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರಾದೇವಿ ಶಕ್ತಿಪೀಠದ ಪೂಜ್ಯ ರಾಮರಾವ ಮಹಾರಾಜರು ಚಿಂಚೋಳಿ ತಾಲೂಕಿನ ಮೇಲೆ ಬಹಳಷ್ಟು ಪ್ರೀತಿ ಹೊಂದಿದ್ದರು. ನಮ್ಮ ಸಮಾಜವು ಎಲ್ಲ ಕ್ಷೇತ್ರದಲ್ಲಿ ಸಂಘಟಿತರಾಗಿ ಅಭಿವೃದ್ಧಿ ಹೊಂದಬೇಕೆಂಬುದು ಅವರ ಆಸೆಯಾಗಿತ್ತು ಎಲ್ಲರೂ ಒಗ್ಗಟ್ಟಿನಿಂದ ಇರಬೇಕೆಂದು ಹೇಳಿದರು.

ಕಾಂಗ್ರೆಸ ಮುಖಂಡ ಸುಭಾಷ ರಾಠೋಡ ಮಾತನಾಡಿ, ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚುಸುವಲ್ಲಿ ಬಂಜಾರ ಸಮಾಜದ ಕೊಡುಗೆ ಅಪಾರವಾಗಿದೆ. ಮಾಜಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಬಂಜಾರರು ಸಾಂಸ್ಕೃತಿಕ ರಾಯಭಾರಿಗಳು ಎಂದಿದ್ದರು. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಸರಕಾರಿ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ ಕೆ.ಟಿ.ರಾಠೋಡ, ಡಿ.ದೇವರಾಜ ಅರಸು ಅವರ ಪ್ರಯತ್ನದಿಂದಾಗಿ ನಮಗೆ ಎಲ್ಲ ಕ್ಷೇತ್ರದಲ್ಲಿ ಸವಲತ್ತುಗಳು ಸಿಗುತ್ತಿವೆ ಎಂದರು.

ವೇದಿಕೆಯಲ್ಲಿ ಪೂಜ್ಯರಾದ ಬಳಿರಾಮ ಮಹಾರಾಜ, ವಿಠಲ ಮಹಾರಾಜ, ರಾಜು ಮಹಾರಾಜ, ವಿಠಲ ಮಹಾರಾಜ, ಬಾಬುರಾವ ಪಾಟೀಲ, ಅಶೋಕ ಮಗದಂಪೂರ, ಅಶೋಕ ಚವ್ಹಾಣ, ರಾಜೂ ಪವಾರ, ಜಗನ್ನಾಥ ರಾಠೋಡ, ಯಮರಾಜ, ನಟರಾಜ, ಮೋತಿರಾಮ ರಾಠೋಡ, ಪ್ರೇಮಸಿಂಗ ಜಾಧವ್, ಮೇಘರಾಜ ರಾಠೋಡ, ಡಾ.ತುಕಾರಾಮ ಪವಾರ, ಲಿಂಬಾಜಿ ರಾಠೋಡ, ಸಂಜೀವ ಚವ್ಹಾಣ, ಶ್ರೀಕಾಂತ ಜಾಧವ್ ಸೇರಿ ಬಂಜಾರ ಸಮಾಜದ ಅನೇಕರಿದ್ದರು.