ಸಾರಾಂಶ
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘ಕಾನೂನು ಅರಿವು’ ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್ ಜಡ್ಜ್ ಶರ್ಮಿಳಾ ಎಸ್. ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿಮಹಿಳೆ ಎಂದರೆ ಭೂಮಿ ತೂಕದ ಶಕ್ತಿ ಸಾಮರ್ಥ್ಯ ಹೊಂದಿದವಳು ಎಂದು ಮಹಿಳೆಯನ್ನು ದೇವತೆಗೆ ಹೋಲಿಸುವ ಸಂಸ್ಕೃತಿ ನಮ್ಮದಾದರೂ ಅವಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದನ್ನು ತಡೆಯಲು ಕಾನೂನಿನ ಸರಿಯಾದ ಅರಿವು ನಮಗಿರಬೇಕು. ಕಾನೂನನ್ನು ಜಾಗರೂಕತೆಯಿಂದ ಬಳಸಿಕೊಂಡು ಮಹಿಳೆಯು ಬದುಕಬೇಕು ಎಂದು ಹಿರಿಯ ಸಿವಿಲ್ ಜಡ್ಜ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲೆ, ಇಲ್ಲಿನ ಸದಸ್ಯ ಕಾರ್‍ಯದರ್ಶಿ ಶರ್ಮಿಳಾ ಎಸ್. ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಅವರು ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲ್ಪಟ್ಟ ‘ಕಾನೂನು ಅರಿವು’ ಕಾರ್‍ಯಕ್ರಮದಲ್ಲಿ ಮಾತನಾಡಿದರು.ಅತಿಥಿಗಳಾದ ಲೀಗಲ್ ಎಡ್ ಡಿಫೆನ್ಸ್ ಕೌನ್ಸಿಲ್‌ನ ಸಹಾಯಕರಾದ ಭಾನುಮತಿ ಅವರು ಪಾಲಕರು ನೀಡಿದ ಸ್ವಾತಂತ್ರ್ಯ ಹಾಗೂ ಸಂವಿಧಾನ ನೀಡಿದ ಹಕ್ಕುಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಂಗ್ಲ ವಿಭಾಗದ ಮುಖ್ಯಸ್ಥೆ ವಸಂತ ರವಿಪ್ರಕಾಶ್ ಅವರು ಮಹಿಳೆಯರಾಗಿ ನಾವು ಹೆಮ್ಮೆ ಪಡಬೇಕು ಹಾಗೂ ಕಾನೂನನ್ನು ಸರಿಯಾಗಿ ಹೇಗೆ ಬಳಸಿಕೊಳ್ಳಬೇಕು ಎಂದು ನಮಗೆ ಅರಿವಿರಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.ಮಹಿಳಾ ಘಟಕದ ಸಂಯೋಜಕರಾದ ಅರ್ಚನಾ ಎಸ್. ಕಾರಂತ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಹರ್ಷಿತಾ ಮತ್ತು ವೈಷ್ಣವಿ ಪ್ರಾರ್ಥಿಸಿದರು. ಮಹಿಳಾ ಘಟಕದ ಸಹ ಸಂಯೋಜಕರಾದ ಡಾ. ಭೈರವಿ ಪಾಂಡ್ಯ ವಂದಿಸಿದರು. ಕುಮಾರಿ ಅನುಷಾ ಎಚ್. ಕಾರ್‍ಯಕ್ರಮ ನಿರೂಪಿಸಿದರು.