ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹುಬ್ಬಳ್ಳಿ ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ಎರಡನೆಯ ಟರ್ಮಿನಲ್ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಮಾ.10ರಂದು ವರ್ಚುವಲ್ ಮೂಲಕ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಐತಿಹಾಸಿಕತೆ ಹಾಗೂ ಸಂಸ್ಕೃತಿಯ ಪ್ರತಿರೂಪದಂತೆ ವಿನ್ಯಾಸಗೊಳಿಸಲಾಗಿದೆ.ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ಕೇಂದ್ರ ಸರ್ಕಾರ ₹273 ಕೋಟಿ ಬಿಡುಗಡೆ ಮಾಡಿದೆ. ಈಗಿರುವ ಕಟ್ಟಡದ ವಿಸ್ತರಣೆ, ರನವೇ, ಅಪಾನ್ ವಿಸ್ತರಣೆ, ಕಾರ್ಗೋ ನಿರ್ವಹಣೆ ಸೇರಿದಂತೆ ಎಲ್ಲ ಸೌಲಭ್ಯಗಳು ಮೇಲ್ದರ್ಜೆಗೇರಲಿವೆ.
ಸಾಮರ್ಥ್ಯ ಎಷ್ಟಿದೆ; ಎಷ್ಟಾಗುತ್ತೆ?ಸದ್ಯ ಈಗಿರುವ ವಿಮಾನ ನಿಲ್ದಾಣದ ಟರ್ಮಿನಲ್ 3,600 ಚದರ ಮೀ. ವಿಸ್ತೀರ್ಣ ಹೊಂದಿದೆ. ಇದು ಏಕಕಾಲದಲ್ಲಿ 600 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಈಗಿನ ಕಟ್ಟಡದ ಪಕ್ಕದಲ್ಲೇ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣ ಮಾಡಲು ಯೋಜಿಸಲಾಗಿದೆ. 20 ಸಾವಿರ ಚದರ ಮೀಟರ್‌ಗೆ ಟರ್ಮಿನಲ್ ವಿಸ್ತರಣೆಯಾಗಲಿದೆ. ಏಕಕಾಲಕ್ಕೆ 2400 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ನಿಲ್ದಾಣ ಹೊಂದಲಿದೆ.
ಹೊಸ ಟರ್ಮಿನಲ್ ಕಟ್ಟಡದ ವಿಸ್ತರಣೆ ಜತೆಗೆ ವಾಹನಗಳ ಪಾರ್ಕಿಂಗ್‌ಗೂ ವ್ಯವಸ್ಥೆ ಮಾಡಲಾಗುತ್ತಿದೆ. 500 ಕಾರು, 10 ಬಸ್, 100 ಟ್ಯಾಕ್ಸಿ, ಬೈಕ್ ಹಾಗೂ ಸಿಬ್ಬಂದಿಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಇಲ್ಲಿರಲಿದೆ. ಈ ನಿಲ್ದಾಣ ಪರಿಸರ ಸ್ನೇಹಿ ನಿಲ್ದಾಣವಾಗಿ ಹೊರಹೊಮ್ಮಲಿದೆ. ನಾಸಿಕ್ ಮೂಲದ ಹಾರ್ಶ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಹೊಸ ಟರ್ಮಿನಲ್ ನಿರ್ಮಿಸುವ ಟೆಂಡರ್ ಆಗಿದೆ ಎಂದು ಮೂಲಗಳು ತಿಳಿಸಿವೆ.ಇತಿಹಾಸ- ಸಂಸ್ಕೃತಿಯ ಪ್ರತೀಕ:
ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮಾರ್ಗಸೂಚಿಗಳ ಪ್ರಕಾರ ವಿನ್ಯಾಸಗೊಳಿಸಲಾಗಿದೆ. ನಿಲ್ದಾಣದ ಒಳಗೆ ಎಎಐ ಮಾರ್ಗಸೂಚಿಯಂತೆ ವಿನ್ಯಾಸಗೊಳಿಸಿದರೂ ಪ್ರವೇಶದ್ವಾರವನ್ನು ಉತ್ತರ ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯ ಪ್ರತಿರೂಪದಂತೆ ನಿರ್ಮಿಸಲು ನಿರ್ಧರಿಸಲಾಗಿದೆ. ಪ್ರವೇಶದ್ವಾರದ ಕಂಬಗಳನ್ನು ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನದ ಕಲ್ಲಿನ ಕಂಬಗಳಂತೆ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆಗೆ ₹273 ಕೋಟಿ ಬಿಡುಗಡೆ ಮಾಡಿದೆ. 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, 2026ರೊಳಗೆ ಕಾಮಗಾರಿ ಪೂರ್ಣವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮೋದಿ ಶಂಕು ಸ್ಥಾಪನೆಪ್ರಧಾನಿ ನರೇಂದ್ರ ಮೋದಿ ಮಾ.10ರಂದು ಉತ್ತರ ಪ್ರದೇಶದ ಅಜಂಗಡದಿಂದ ವರ್ಚುವಲ್ ಮೂಲಕ ಅಡಿಗಲ್ಲು ಇರಿಸಲಿದ್ದಾರೆ. ಅಂದು ದೇಶದ ವಿವಿಧ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಅದರಲ್ಲಿ ಕರ್ನಾಟಕದ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣದ ಉನ್ನತೀಕರಣದ ಕಾಮಗಾರಿಯೂ ಸೇರಿದೆ.
ಅಂದು ಮಧ್ಯಾಹ್ನ 12ಗಂಟೆಗೆ ಅಡಿಗಲ್ಲು ಇರಿಸುವ ಕಾರ್ಯ ನಡೆಯಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.