ಸಾರಾಂಶ
ಶ್ರೀಕಾಂತ್ ಎನ್. ಗೌಡಸಂದ್ರ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ನೀರಿನ ಹಾಹಾಕಾರದ ಬೆನ್ನಲ್ಲೇ ವಿದ್ಯುತ್ ಕ್ಷಾಮ ಎದುರಾಗಿದೆ. ಸರಾಸರಿ 200ರಿಂದ 250 ದಶಲಕ್ಷ ಯುನಿಟ್‌ನಷ್ಟಿರುತ್ತಿದ್ದ ನಿತ್ಯದ ಸರಾಸರಿ ವಿದ್ಯುತ್ ಬೇಡಿಕೆ ಮಾ.6ರಂದು 323 ದಶಲಕ್ಷ ಯುನಿಟ್‌ಗೆ ಹೆಚ್ಚಾಗಿದೆ.
ಪರಿಣಾಮ ಕೊರತೆ ನೀಗಿಸಲು ರಾಜ್ಯವು ವಿದ್ಯುತ್ ಖರೀದಿ ಮೊರೆ ಹೋಗಿದೆ.ಮತ್ತೊಂದೆಡೆ, ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗದೆ ಹಲವೆಡೆ ಅನಧಿಕೃತ ಲೋಡ್ ಶೆಡ್ಡಿಂಗ್ ಶುರುವಾಗಿದೆ. ಹೀಗಾಗಿ ಇನ್ನು ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯನ್ನು ನಾಗರಿಕರು ಎದುರಿಸಬೇಕಿದೆ.
ರಾಜ್ಯದಲ್ಲಿ ವಿದ್ಯುತ್‌ನ ಸರಾಸರಿ ಬೇಡಿಕೆ 250 ದಶಲಕ್ಷ ಯುನಿಟ್‌ನ ಆಸುಪಾಸು ಇರುತ್ತದೆ. ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ಎ.ಸಿ., ಫ್ಯಾನ್ ಮತ್ತಿತರ ವಿದ್ಯುತ್ ಉಪಕರಣಗಳ ಬಳಕೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.
ಹೀಗಾಗಿ ಮಾ.6ರಂದು ಬುಧವಾರ ಬರೋಬ್ಬರಿ 323.27 ದಶಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿದೆ.ಪ್ರಸಕ್ತ ವರ್ಷದ ಜ.1 ರಂದು 261 ದಶಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿತ್ತು.
ಕಳೆದ ವರ್ಷದ ಮಳೆಗಾಲದಲ್ಲಿ ಉದಾಹರಣೆಗೆ- ಆ.1 ರಂದು 200 ದಶಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿತ್ತು. ವಾಡಿಕೆ ದಿನಗಳಲ್ಲಿ 200 ರಿಂದ 250 ದಶಲಕ್ಷ ಯುನಿಟ್‌ನಷ್ಟಿರುವ ವಿದ್ಯುತ್ ಬಳಕೆ ಕಳೆದ ಎರಡು ವಾರದಿಂದ ನಿಧಾನವಾಗಿ ಏರುಗತಿಯಲ್ಲೇ ಸಾಗುತ್ತಿದೆ.
ಇನ್ನು ಮೆಗಾವ್ಯಾಟ್‌ಗಳಿಗೆ ಹೋಲಿಸಿದರೆ ಕಳೆದ ಆ.1ರಂದು ಗರಿಷ್ಠ 11,054 ಮೆ.ವ್ಯಾಟ್ ವಿದ್ಯುತ್ ಬಳಕೆಯಾಗಿತ್ತು. 9 ಸಾವಿರದಿಂದ 12 ಸಾವಿರ ಮೆ.ವ್ಯಾಟ್‌ನಷ್ಟಿರುವ ಸರಾಸರಿ ವಿದ್ಯುತ್ ಬೇಡಿಕೆ ಮಾ.6 ರಂದು ಬುಧವಾರ 16,790 ಮೆ.ವ್ಯಾಟ್‌ಗೆ ತಲುಪಿದೆ.
ವಿದ್ಯುತ್ ಉತ್ಪಾದನೆ ಕುಸಿತ: ಇನ್ನು ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದನೆ ಸ್ಥಾವರಗಳಲ್ಲಿ ಗರಿಷ್ಠ 8,852 ಮೆ.ವ್ಯಾಟ್ ಉತ್ಪಾದನೆ ಸಾಮರ್ಥ್ಯವಿದ್ದರೂ ಮಾ.6 ರಂದು ಕೇವಲ 3,685 ಮೆ.ವ್ಯಾಟ್ ಮಾತ್ರ ವಿದ್ಯುತ್ ಉತ್ಪಾದನೆಯಾಗಿದೆ.
ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿದಿರುವುದರಿಂದ ಜಲವಿದ್ಯುತ್ ಉತ್ಪಾದನೆ ಭಾಗಶಃ ಕುಸಿದಿದ್ದು, ಉಷ್ಣು ವಿದ್ಯುತ್ ಸ್ಥಾವರಗಳ ಮೇಲೆ ಹೊರೆ ಹೆಚ್ಚಾಗಿದೆ.
ತನ್ಮೂಲಕ ಆರ್‌ಟಿಪಿಎಸ್, ಬಿಟಿಪಿಎಸ್, ವೈಟಿಪಿಎಸ್ ಘಟಕಗಳಲ್ಲಿ 5,020 ಮೆ.ವ್ಯಾಟ್ ಸಾಮರ್ಥ್ಯವಿದ್ದರೆ 2,741 ಮೆ.ವ್ಯಾಟ್ ಗರಿಷ್ಠ ಉತ್ಪಾದನೆ ಮಾಡಲಾಗುತ್ತಿದೆ.
ಸಾಮರ್ಥ್ಯಕ್ಕೆ ಹೋಲಿಸಿದರೆ ಶೇ.55ಕ್ಕಿಂತ ಕಡಿಮೆ ಉತ್ಪಾದನೆಯಾಗುತ್ತಿದ್ದರೂ ಒಟ್ಟಾರೆ ಜಲವಿದ್ಯುತ್‌ಗೆ ಹೋಲಿಸಿದರೆ ಉಷ್ಣ ವಿದ್ಯುತ್ ಸ್ಥಾವರಗಳಿಂದಲೇ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಐಪಿಪಿಗಳ ಮೇಲೆ ಅವಲಂಬನೆ: ರಾಜ್ಯದ ಬೇಡಿಕೆಗೆ ಹೋಲಿಸಿದರೆ ಸರ್ಕಾರಿ ಸ್ಥಾವರಗಳಲ್ಲಿನ ಉತ್ಪಾದನೆ ತೀರಾ ಕಡಿಮೆಯಾಗಿರುವುದರಿಂದ ರಾಜ್ಯವು ಸ್ವಾಯತ್ತ ಇಂಧನ ಉತ್ಪಾದಕ ಸಂಸ್ಥೆಗಳ (ಐಪಿಪಿ) ಮೇಲೆ ಅವಲಂಬನೆ ಹೆಚ್ಚಾಗಿದೆ.
ಮಾ.6 ರಂದು ಬುಧವಾರ ಕೇಂದ್ರದ ಗ್ರಿಡ್‌ನಿಂದ 6,862 ಮೆ.ವ್ಯಾಟ್ ವಿದ್ಯುತ್ ಡ್ರಾ ಮಾಡಿದ್ದು, ಉಳಿದಂತೆ ಖಾಸಗಿ ಸಂಸ್ಥೆಗಳಿಂದ ಪೂರೈಸುವ ಎನ್‌ಸಿಇ (ನಾನ್ ಕನ್ವೆನ್ಷನಲ್ ಎನರ್ಜಿ ಪ್ರಾಜೆಕ್ಟ್ಸ್) ಜಾಲದಿಂದ ಗರಿಷ್ಠ 5,363 ಮೆ.ವ್ಯಾಟ್ ವಿದ್ಯುತ್ ಬಳಕೆ ಮಾಡಿಕೊಳ್ಳಲಾಗಿದೆ
34.41 ದಶಲಕ್ಷ ಯುನಿಟ್ ವಿದ್ಯುತ್ ಖರೀದಿ: ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ ವಾಸ್ತವವಾಗಿ ವಿದ್ಯುತ್ ಕೊರತೆ ತೀವ್ರವಾಗಿ ಕಾಡುತ್ತಿದೆ.
ಬುಧವಾರ (ಮಾ.3) ಡಿವಿಸಿಯಿಂದ (ದಾಮೋದರ್ ವ್ಯಾಲಿ ಕಾರ್ಪೊರೇಷನ್) 9.99 ದಶಲಕ್ಷ ಯುನಿಟ್ (450 ಮೆ.ವ್ಯಾಟ್), ಯುಪಿಸಿಎಲ್‌ನಿಂದ 9.95 ದಶಲಕ್ಷ ಯುನಿಟ್ (416 ಮೆ.ವ್ಯಾಟ್) ವಿದ್ಯುತ್ ಖರೀದಿ ಮಾಡಲಾಗಿದೆ.
ಇದರ ಜೊತೆಗೆ ರಾಜ್ಯಗಳ ನಡುವಿನ ಹೊಂದಾಣಿಕೆಗೆ ಇರುವ ಪವರ್ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಮಾ.6ರಂದು 14.47 ದಶಲಕ್ಷ ಯುನಿಟ್ ಪಡೆಯಲಾಗಿದೆ.