ಸಿದ್ದಗಂಗಾ ಕಾಲೇಜಿಗೆ ನ್ಯಾಕ್ ನಿಂದ ಎ ಗ್ರೇಡ್ ಮಾನ್ಯತೆ

| Published : Mar 08 2024, 01:50 AM IST

ಸಾರಾಂಶ

ತುಮಕೂರಿನ ಬಿ.ಎಚ್. ರಸ್ತೆಯಲ್ಲಿರುವ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಮಂಡಲಿ (ನ್ಯಾಕ್) ಯಿಂದ "ಎ " ಗ್ರೇಡ್ ಮಾನ್ಯತೆ ದೊರೆತಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಬಿ.ಎಚ್. ರಸ್ತೆಯಲ್ಲಿರುವ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಮಂಡಲಿ (ನ್ಯಾಕ್) ಯಿಂದ "ಎ " ಗ್ರೇಡ್ ಮಾನ್ಯತೆ ದೊರೆತಿದೆ. ಕಳೆದ ಫೆ. 21 ಮತ್ತು 22 ರಂದು ಕಾಲೇಜಿಗೆ 4ನೇ ಸುತ್ತಿಗೆ ರಾಷ್ಟ್ರೀಯ ಮೌಲ್ಯಮಾಪನ ಪ್ರಕ್ರಿಯೆಗೆ ನ್ಯಾಕ್ ತಜ್ಞರ ಸಮಿತಿ ಭೇಟಿ ನೀಡಿ, ಪರಿಶೀಲಿಸಿ ಕಾಲೇಜಿಗೆ "ಎ " ಶ್ರೇಣಿ (ಸಿಜಿಪಿಎ-3.16)ಯನ್ನು ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಪಿ.ವೀರಭದ್ರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಪದವಿ ಕಾಲೇಜುಗಳ ಪೈಕಿ ನ್ಯಾಕ್‌ನಿಂದ "ಎ " ಶ್ರೇಣಿ ಪಡೆದ ಮೊದಲು ಕಾಲೇಜು ನಮ್ಮದಾಗಿದೆ. ಹಾಗೆಯೇ ರಾಜ್ಯದ ಕೆಲವೇ ಕೆಲವು ಕಾಲೇಜುಗಳಲ್ಲೂ ಸಹ ಒಂದಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಪ್ರಸ್ತುತ ನಮ್ಮ ಕಾಲೇಜು ೫೮ನೇ ವರ್ಷಕ್ಕೆ ಕಾಲಿಟ್ಟಿದ್ದು, ಶೈಕ್ಷಣಿಕವಾಗಿ ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಈಗಾಗಲೇ ಕಾಲೇಜಿಗೆ ನ್ಯಾಕ್ ತಜ್ಞರ ಸಮಿತಿಯು ಶಿಕ್ಷಣದ ಗುಣಮಟ್ಟ ಮೌಲ್ಯಮಾಪನ ಮಾಡಲು ಮೂರು ಬಾರಿ ಭೇಟಿ ನೀಡಿ, ಕಾಲೇಜಿನ ಗುಣಮಟ್ಟವನ್ನು ಪರಿಶೀಲಿಸಿ ಕ್ರಮವಾಗಿ ಬಿ+, ಬಿ ಮತ್ತು ಬಿ++ ಶ್ರೇಣಿಯನ್ನು ನೀಡಿತ್ತು ಎಂದು ಅವರು ತಿಳಿಸಿದರು.

ಈಗ 4ನೇ ಬಾರಿಗೆ ಭೇಟಿ ನೀಡಿದ್ದ ಡಾ.ಗೌತಮ್ ಬರುವ, ಡಾ.ವೆಂಕಟಾಚಲಂ ಕುರುಮ ಹಾಗ ಡಾ. ಶೋಭನಾ ಅವರನ್ನು ಒಳಗೊಂಡ ನ್ಯಾಕ್ ಸಮಿತಿಯ ತಜ್ಞರ ತಂಡ ಕಾಲೇಜಿನ ಅಧ್ಯಾಪಕರು, ಪೋಷಕರು ಮತ್ತು ವಿದ್ಯಾರ್ಥಿಗಳೊದಿಗೆ ಸಂವಾದ ನಡೆಸಿ ಗುಣಮಟ್ಟವನ್ನು ಪರಿಶೀಲಿಸಿ ನಮ್ಮ ಕಾಲೇಜಿಗೆ "ಎ " ಗ್ರೇಡ್ ಮಾನ್ಯತೆ ನೀಡಿದ್ದಾರೆ. ಇದಕ್ಕೆ ಕಾರಣರಾದ ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿಗಳ ಸಂಘ, ಪೋಷಕರು, ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

2024-25ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ ಮತ್ತು ಬಿಬಿಎ ಪದವಿ ಕೋರ್ಸ್ಗಳಿಗೆ ಪ್ರವೇಶ ದಾಖಲಾತಿಯನ್ನು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದ ತಕ್ಷಣವೇ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಸೋಮಶೇಖರಯ್ಯ, ಪ್ರೊ. ಅನಿಲ್‌ಕುಮಾರ್, ಪ್ರೊ. ಬಿ. ಬಸವೇಶ್ ಉಪಸ್ಥಿತರಿದ್ದರು.