ರಾಜ್ಯದ ರಾಷ್ಟ್ರೀಯ ಹೆದ್ದಾರಿ-275 ಸುರಕ್ಷತೆಗಾಗಿ ಕೇಂದ್ರ ಸರ್ಕಾರದಿಂದ 94.08 ಕೋಟಿ ರು. ಮೊತ್ತದ ಬೃಹತ್ ಯೋಜನೆಗೆ ತಾಂತ್ರಿಕ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯದ ರಾಷ್ಟ್ರೀಯ ಹೆದ್ದಾರಿ-275 ಸುರಕ್ಷತೆಗಾಗಿ ಕೇಂದ್ರ ಸರ್ಕಾರದಿಂದ 94.08 ಕೋಟಿ ರು. ಮೊತ್ತದ ಬೃಹತ್ ಯೋಜನೆಗೆ ತಾಂತ್ರಿಕ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿದ ಅವರು, ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರ್ನಾಟಕದ ಅತ್ಯಂತ ಜನನಿಬಿಡ ಹೆದ್ದಾರಿಗಳಲ್ಲಿ ಒಂದಾದ 275 (ಬಂಟ್ವಾಳ-ಬೆಂಗಳೂರು ವಿಭಾಗ) ರಸ್ತೆಯ ಅಭಿವೃದ್ಧಿಗಾಗಿ (ಸಂಪಾಜೆಯಿಂದ ಕುಶಾಲನಗರದವರೆಗೆ) ಭರ್ಜರಿ ಕೊಡುಗೆ ನೀಡಿದ್ದು, ಈ ರಸ್ತೆ ಅಭಿವೃದ್ಧಿ ಕಾಣಲಿದೆ ಎಂದಿದ್ದಾರೆ.ಈ ಹೆದ್ದಾರಿಯ ಆಯ್ದ ಭಾಗಗಳಲ್ಲಿ ರಕ್ಷಣಾತ್ಮಕ ಗೋಡೆಗಳ ನಿರ್ಮಾಣ ಮತ್ತು ಸುರಕ್ಷತಾ ಕಾಮಗಾರಿಗಳಿಗಾಗಿ 94.08 ಕೋಟಿ ರು. ಆರ್ಥಿಕ ಮತ್ತು ತಾಂತ್ರಿಕ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ ಬಂಟ್ವಾಳ ಮತ್ತು ಬೆಂಗಳೂರು ನಡುವಿನ ಈ ಘಟ್ಟ ಪ್ರದೇಶದ ರಸ್ತೆಯು ಮಳೆಗಾಲದಲ್ಲಿ ಪದೇ ಪದೆ ಭೂ ಕುಸಿತಕ್ಕೆ ತುತ್ತಾಗುತ್ತಿತ್ತು. ಇದನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ಕಿ.ಮೀ. 78.000ರಿಂದ 125.000ವರೆಗಿನ (ಸಂಪಾಜೆ ಯಿಂದ ಕುಶಾಲನಗರವರೆಗೆ) ವ್ಯಾಪ್ತಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಈ ಯೋಜನೆಯನ್ನು ಇಪಿಸಿ (ಎಂಜಿನೀರಿಂಗ್, ಪ್ರೊಕ್ಯೂರ್‌ಮೆಂಟ್ ಆಂಡ್ ಕನ್ ಸ್ಟ್ರಕ್ಷನ್) ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ತಿಳಿಸಿದರು.ಪ್ರಮುಖ ಕಾಮಗಾರಿಗಳು:ಸಚಿವಾಲಯದ ತಾಂತ್ರಿಕ ವರದಿ ಪ್ರಕಾರ ಯೋಜನೆಯು ರಕ್ಷಣಾತ್ಮಕ ಗೋಡೆಗಳು: ಒಟ್ಟು 1,650 ಮೀಟರ್ ಉದ್ದದ ಆರ್‌ಸಿಸಿ ಕ್ಯಾಂಟಿಲಿವರ್ ರಿಟೈನಿಂಗ್ ವಾಲ್ ಮತ್ತು ಕಣಿವೆ ಬದಿಯಲ್ಲಿ ವಿಶೇಷವಾಗಿ 110 ಮೀಟರ್ ಉದ್ದದ ಪ್ರೆಶರ್ ರಿಲೀಫ್ ಗೋಡೆಗಳನ್ನು ನಿರ್ಮಿಸಲಾಗುವುದು. ಬ್ರೆಸ್ಟ್ ವಾಲ್ ಮತ್ತು ಚರಂಡಿ:
ಗುಡ್ಡದ ಬದಿಯಲ್ಲಿ ಮಣ್ಣು ಕುಸಿಯದಂತೆ 1,910 ಮೀಟರ್ ಉದ್ದದ ಬ್ರೆಸ್ಟ್ ವಾಲ್ ಮತ್ತು ನೀರು ಸರಾಗವಾಗಿ ಹರಿಯಲು 2,720 ಮೀಟರ್ ಉದ್ದದ ಚೂಟ್ ಡ್ರೈನ್‌ಗಳನ್ನು ನಿರ್ಮಿಸಲಾಗುತಿದೆ ಎಂದಿದ್ದಾರೆ.ತಿರುವುಗಳ ಸುಧಾರಣೆ: ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು 17 ಆಯ್ದ ಸ್ಥಳಗಳಲ್ಲಿ ಒಟ್ಟು 1,690 ಮೀಟರ್ ಉದ್ದದ ರಸ್ತೆಯನ್ನು ವಿಸ್ತರಿಸಲಾಗುತಿದೆ.ಮೋರಿಗಳ ಪುನರ್ ನಿರ್ಮಾಣ: ಕಿಮೀ 77.750 ಮತ್ತು 89.670ರಲ್ಲಿ ಹಳೆಯದಾದ ಎರಡು ಬಾಕ್ಸ್ ಮೋರಿಗಳನ್ನು ಮರು ನಿರ್ಮಾಣ ಮಾಡಲಾಗುವುದು.
ಸುರಕ್ಷತಾ ಕ್ರಮಗಳು: ರಕ್ಷಣಾತ್ಮಕ ಕ್ರಾಶ್ ಬ್ಯಾರಿಯರ್‌ಗಳು ಮತ್ತು ಆಧುನಿಕ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಎಂದರು. 94.08 ಕೋಟಿ ರು. (ಜಿಎಸ್‌ಟಿ ಮತ್ತು ನಿರ್ವಹಣಾ ವೆಚ್ಚಗಳು ಸೇರಿ). ವೆಚ್ಚದ ಯೋಜನೆಯು ಮಳೆಗಾಲವನ್ನೂ ಒಳಗೊಂಡಂತೆ 18 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಕಾಮಗಾರಿ ಮುಗಿದ ನಂತರ ಮುಂದಿನ 10 ವರ್ಷಗಳ ಕಾಲ ರಸ್ತೆಯ ದೋಷ ಹೊಣೆಗಾರಿಕೆ ಮತ್ತು ನಿರ್ವಹಣೆಯನ್ನು ಗುತ್ತಿಗೆದಾರರು ನೋಡಿಕೊಳ್ಳಬೇಕಾಗುತ್ತದೆ.ಯೋಜನೆಯ ಗುಣಮಟ್ಟ ಕಾಪಾಡಲು ಸಚಿವಾಲಯವು ಹಲವು ಷರತ್ತುಗಳನ್ನು ವಿಧಿಸಿದೆ. ಕಾಮಗಾರಿ ಆರಂಭಿಸುವ ಮುನ್ನ ಮತ್ತು ನಂತರ ನೆಟ್‌ವರ್ಕ್ ಸರ್ವೆ ವೆಹಿಕಲ್ (ಎನ್‌ಎಸ್‌ವಿ) ಮೂಲಕ ರಸ್ತೆಯ ಗುಣಮಟ್ಟವನ್ನು ದಾಖಲಿಸುವುದು ಕಡ್ಡಾಯಗೊಳಿಸಿದೆ ಎಂದಿದ್ದಾರೆ.ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಏಕ ಕಾಲಕ್ಕೆ 3 ಕಿ.ಮೀ.ಗಿಂತ ಹೆಚ್ಚು ಉದ್ದದ ಕಾಮಗಾರಿ ನಡೆಸದಂತೆ ಸೂಚಿಸಲಾಗಿದೆ.ಈ ಯೋಜನೆಯು ಪೂರ್ಣಗೊಂಡ ನಂತರ ಬೆಂಗಳೂರು ಮತ್ತು ಕರಾವಳಿ ಭಾಗದ ನಡುವಿನ ಸಂಚಾರವು ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲೂ ಹೆಚ್ಚು ಸುರಕ್ಷಿತ ಮತ್ತು ಸುಗಮವಾಗಲಿದೆ. ಕಾಮಗಾರಿಗೆ ಮಡಿಕೇರಿ ಸಮೀಪ ಜನವರಿ ಕೊನೆಯ ವಾರ ಚಾಲನೆ ನೀಡಲಾಗುವುದು.
-ಯದುವೀರ್ ಒಡೆಯರ್ ಕೊಡಗು ಮೈಸೂರು ಸಂಸದ.