ಸಾರಾಂಶ
ಹಳಿಯಾಳ: ಶತಮಾನದ ಹೊಸ್ತಿಲಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಖಡ್ಗವನ್ನು ಹಿಡಿದುಕೊಂಡು ಹೋಗುತ್ತಿಲ್ಲ. ಜಗತ್ತನ್ನು ಖಡ್ಗ, ಹಣ, ತೋಳ್ಬಲದ ಬದಲು ಉತ್ತಮ ಗುಣಗಳಿಂದ ವಿಚಾರಧಾರೆಯಿಂದ ಗೆಲ್ಲಬಹುದೆಂಬ ಉದಾತ್ತ ಸಂದೇಶವನ್ನು ಸಂಘವು ನಿತ್ಯವೂ ಸಾರುತ್ತಿದೆ ಎಂದು ಆರ್‌ಎಸ್ಎಸ್ ಬೌದ್ಧಿಕ ಪ್ರಮುಖ ಮಧುಸೂದನ ಕಿರುಗಾರ ತಿಳಿಸಿದರು.
ಪಟ್ಟಣದ ಶಿವಾಜಿ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಳಿಯಾಳ ಪ್ರಾಂತದ ಮಹಾಸಾಂಘಿಕ ಸಭೆಯಲ್ಲಿ ಮಾತನಾಡಿ, ಭಾರತವನ್ನು ಪರಮ ವೈಭವದತ್ತ ಒಯ್ಯುವುದೇ ಸಂಘದ ಮೂಲ ಉದ್ದೇಶವಾಗಿದೆ. ಸಂಘದ ಬಗ್ಗೆ ಸಾಕಷ್ಟು ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಜಾತೀಯ ವಿಷಬೀಜವನ್ನು ಬಿತ್ತುವ ಕೋಮುವಾದವನ್ನು ಹರಡುವ ಕಾರ್ಯ ಸಂಘ ಮಾಡುತ್ತಿದೆ ಎಂಬ ಗೂಬೆಯನ್ನು ಕೂರಿಸಲಾಗುತ್ತಿದೆ. ಆದರೆ ಸಂಘವು ಸಮಾಜದ ಕೆಲಸವೇ ಭಗವಂತನ ಕೆಲಸವೆಂಬ ಸಂಕಲ್ಪದಿಂದ ಸೇವೆಯನ್ನು ಸಲ್ಲಿಸುತ್ತಿದ್ದು, ನಾವು ದೇಶದ್ರೋಹಿಗಳಲ್ಲ ಎಂದರು.ಜಾತ್ಯತೀತ ಹೆಸರಿನಲ್ಲಿ ನಮ್ಮ ರಾಜಕೀಯ ವ್ಯವಸ್ಥೆಯು ಸಮಾಜವನ್ನು ಒಡೆದು ವಿಂಗಡಿಸಿದೆ. ನಮ್ಮ ದೇಶದ ಎಲ್ಲ ಸಮಾಜ ಸುಧಾರಕರನ್ನು ಒಂದೊಂದು ಜಾತಿಗೆ ಕಟ್ಟಿಹಾಕಲಾಗಿದೆ ಎಂದರು.
ವ್ಯಕ್ತಿಯ ಅರ್ಹತೆಯ ಬದಲು ಅವನ ಜಾತಿ ಯಾವುದೆಂದು ನೋಡಿ ಮರ್ಯಾದೆ ಕೊಡುವಂತಹ ಅನಿಷ್ಟ ನಮ್ಮಲ್ಲಿ ಮನೆ ಮಾಡಲಾರಂಭಿಸಿದೆ. ಆದರೆ ನಮ್ಮ ಸಂಘವು ಇಡೀ ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ನಿರಂತರವಾಗಿ ನಿಸ್ವಾರ್ಥ ಮನದಿಂದ ಶ್ರಮಿಸುತ್ತಿದೆ ಎಂದರು.ಕೇಸರಿಕರಣವು ಎನ್ನುವುದು ಸಮಾಜದ ವಿರೋಧಿಯಲ್ಲ, ಅಲ್ಪಸಂಖ್ಯಾತರ ವಿರೋಧಿಯಲ್ಲ. ನಿಸ್ವಾರ್ಥ ಸಮಾಜ ಸೇವೆಯೆ ಕೇಸರಿಕರಣ, ಯಾವುದು ಸಮಾಜಕ್ಕೆ ಒಳ್ಳೆಯದೋ ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಕೇಸರಿಕರಣ. ಈ ಕೇಸರಿಕರಣವನ್ನು ಹರಡುವ ಕಾರ್ಯದಲ್ಲಿ ಸಂಘ ತೊಡಗಿಸಿಕೊಂಡಿದೆ. ಸಂಘಕ್ಕೆ ಶ್ರೇಷ್ಠವಾದ ಹೆಸರಿದೆ. ಉತ್ತಮವಾದ ಸ್ಥಾನವಿದೆ. ಪ್ರತಿನಿತ್ಯವೂ ಸಂಘದ ಕಾರ್ಯಕರ್ತರು ನಿಸ್ವಾರ್ಥ ಮನೋಭಾವನೆಯಲ್ಲಿ ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಸಂಘವು ಪರಿಸರ ಸಂರಕ್ಷಣೆ, ಗೋಮಾತೆಯ ಸೇವೆ, ಉತ್ತಮ ಸಂಸ್ಕಾರಗಳನ್ನು ಬೋಧಿಸುತ್ತಿದ್ದು, ಎಲ್ಲರ ಮನೆ ಮತ್ತು ಮನಗಳನ್ನು ಮುಟ್ಟುವ ದಿಸೆಯಲ್ಲಿ ತೊಡಗಿಕೊಂಡಿದೆ. ಭಾರತದ ನೆರಳಿನಲ್ಲಿ ಇಡೀ ವಿಶ್ವವು ಒಂದಾಗಿ ನಡೆದರೆ ಎಲ್ಲೆಡೆ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯು ಸಂಭ್ರಮಿಸಲಿದೆ. ಅದಕ್ಕಾಗಿ ಸಂಘವು ನಮ್ಮ ದೇಶವನ್ನು ವಿಶ್ವಗುರುವನ್ನಾಗಿಸಲು ಶ್ರಮಿಸಲಾರಂಭಿಸಿದೆ ಎಂದರು.ವಕೀಲ ಮಂಜುನಾಥ ಮಾದರ ಮಾತನಾಡಿ ಶಿಸ್ತು ಅಂದರೇ ಸಂಘ. ಶಿಸ್ತನ್ನು ಕಲಿಯಬೇಕಂದರೆ ಸಂಘವನ್ನು ನೋಡಿ ಕಲಿಯಬೇಕು. ಸಂಸ್ಥಾಪನೆಯ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ಸಂಘವು ಆರಂಭದಿಂದಲ್ಲೂ ಕೈಗೊಂಡ ದೇಶಪ್ರೇಮ ಮತ್ತು ದೇಶರಕ್ಷಣೆಗಾಗಿ ಭಾರತದ ನಾಗರಿಕರನ್ನು ಯುವಪ್ರಜೆಗಳನ್ನು ಅಣಿಗೊಳಿಸುವ ಆ ಮಹಾಸೇವೆಯು ಮುಂದುವರಿಯಲಿ, ಸಂಘವು ಬೆಳೆಯಲಿ ಎಂದರು.
ಪ್ರಮುಖರಾದ ವಿಎಚ್‌ಪಿ ತಾಲೂಕು ಅಧ್ಯಕ್ಷ ಶ್ರೀಪತಿ ಭಟ್, ಮಂಗೇಶ ದೇಶಪಾಂಡೆ, ಅಪ್ಪಾಸಾಹೇಬ ದೇಸಾಯಿ, ಪೂಜಾ ದೂಳಿ ಹಾಗೂ ಇತರರು ಇದ್ದರುಸಭಾ ಕಾರ್ಯಕ್ರಮಕ್ಕೂ ಮುನ್ನ ಗಣವೇಷಧಾರಿಗಳ ಪಥಸಂಚಲನವು ನಗರದ ಮುಖ್ಯ ಬೀದಿಯಲ್ಲಿ ನಡೆಯಿತು. ಮಾಜಿ ಶಾಸಕ ಸುನೀಲ ಹೆಗಡೆ, ಪ್ರಮುಖರಾದ ಅನಿಲ್ ಮುತ್ನಾಳೆ, ಶಿವಾಜಿ ನರಸಾನಿ, ವಿ.ಎಂ. ಪಾಟೀಲ, ಗಣಪತಿ ಕರಂಜೇಕರ, ವಾಸುದೇವ ಪೂಜಾರಿ, ಅಪ್ಪಾರಾವ್ ಪೂಜಾರಿ, ಬಾಳಕೃಷ್ಣ ಶಹಾಪುರಕರ, ಉಮೇಶ ದೇಶಪಾಂಡೆ, ಪ್ರಮೋದ ಹುನ್ಸವಾಡಕರ ಹಾಗೀ ಇತರರು ಇದ್ದರು.