ವಿರೋಧ ಮಾಡಿದಷ್ಟು ಬೆಳೆಯುತ್ತಿರುವ ಆರೆಸ್ಸೆಸ್‌

| Published : Oct 27 2025, 12:00 AM IST

ಸಾರಾಂಶ

ಮಾಲೂರಿನಲ್ಲಿ ಬಹಳಷ್ಟು ವರ್ತಕರು ತಮ್ಮ ಅಂಗಡಿಗಳು ಮುಚ್ಚಿ ಗಣವೇಷಧಾರಿಗಳಾಗಿ ಪಥ ಸಂಚಲನಾದಲ್ಲಿ ಭಾಗವಹಿಸಿದ್ದರು. ಪಥ ಸಂಚಲನಾ ನಡೆಸುವ ಮಾರ್ಗದಲ್ಲಿ ಸಿಗುವ ಪ್ರತಿ ವೃತ್ತಗಳಲ್ಲಿ ಗಣವೇಷಧಾರಿಗಳನ್ನು ಸ್ವಾಗತಿಸಲಾಯಿತು. ಗಾಂಧಿ ವೃತ್ತದಲ್ಲಿ ಸುಮಾರು ಐನೂರು ಕೆ.ಜಿ.ಹೂ ಗಳನ್ನು ಗಣವೇಷಧಾರಿಗಳ ಮೇಲೆ ಚೆಲ್ಲಿ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಮಾಲೂರು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪಥ ಸಂಚಲನದಲ್ಲಿ ಐದು ಸಾವಿರಕ್ಕೂ ಹೆಚ್ಚು ಗಣವೇಷಧಾರಿಗಳು ಭಾಗವಹಿಸಿದ್ದು, ಶಾಂತಿಯುತವಾಗಿ ಪಥ ಸಂಚಲನ ನಡೆಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೋಂಡ ಕ್ರೀಡಾಂಗಾಣದಿಂದ ಹೂರಟ ಪಥ ಸಂಚಲನಕ್ಕೆ ಮಾತೆಯರು ದೀಪ ಬೆಳಗಿ ಚಾಲನೆ ನೀಡಿದರು. ಹೋಂಡ ಕ್ರೀಡಾಂಗಾಣದಿಂದ ಹೊರಟ ಪಥ ಸಂಚಲನಾದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಚಿಣ್ಣರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

500 ಕೆಜಿ ಹೂ ಮಳೆ

ಬಹಳಷ್ಟು ವರ್ತಕರು ತಮ್ಮ ಅಂಗಡಿಗಳು ಮುಚ್ಚಿ ಗಣವೇಷಧಾರಿಗಳಾಗಿ ಪಥ ಸಂಚಲನಾದಲ್ಲಿ ಭಾಗವಹಿಸಿದ್ದರು.ಪಥ ಸಂಚಲನಾ ನಡೆಸುವ ಮಾರ್ಗದಲ್ಲಿ ಸಿಗುವ ಪ್ರತಿ ವೃತ್ತಗಳನ್ನೂ ಸ್ವಚ್ಚಗೊಳಿಸಿ ಗಣವೇಷಧಾರಿಗಳನ್ನು ಸ್ವಾಗತಿಸಲಾಯಿತು. ಗಾಂಧಿ ವೃತ್ತದಲ್ಲಿ ನಗರಸಭೆ ಸದಸ್ಯ ಅಲೂಮಂಜು ನೇತೃತ್ವದಲ್ಲಿ ಸುಮಾರು ಐನೂರು ಕೆ.ಜಿ.ಹೂ ಗಳನ್ನು ಗಣವೇಷಧಾರಿಗಳ ಮೇಲೆ ಚೆಲ್ಲಿ ದೇಶ ಪ್ರೇಮದ ಘೋಷಣೆ ಕೊಗಲಾಯಿತು.

ಮಾಜಿ ಸಂಸದ ಮುನಿಸ್ವಾಮಿ,ಮಾಜಿ ಸಚಿವ ಎಸ್‌.ಎನ್‌.ಕೃಷ್ಣಯ್ಯ ಶೆಟ್ಟಿ,ಮಾಜಿ ಶಾಸಕ ಮಂಜುನಾಥ್‌ ಗೌಡ,ಆರ್.ಪ್ರಭಾಕರ್‌ ,ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಹಾಗೂ ಪಕ್ಷಾತೀತವಾಗಿ ನಗರ ಸಭೆ ಸದಸ್ಯರುಗಳು ,ವಿವಿಧ ಪಕ್ಷದ,ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.ಕಾಂಗ್ರೆಸ್‌ಗೆ ರಾಜಕೀಯ ಅಸ್ಥಿರತೆ

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದ ಮುನಿಸ್ವಾಮಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೬ ವರ್ಷದ ಇತಿಹಾಸ ಇದೆ. ಯಾವುದೇ ದೇಶ ವಿರೋಧಿ ಕೃತ್ಯದಲ್ಲಿ ಪಾಲ್ಗೊಳದೆ ದೇಶ ಸೇವೆ ಮಾಡುತ್ತಿರುವ ಆರ್.ಎಸ್.ಎಸ್‌ ಮೇಲೆ ತಮ್ಮ ರಾಜಕೀಯ ಆಸ್ಥಿರತೆಯಿಂದ ಕಂಗಾಲಾಗಿರುವ ಕಾಂಗ್ರೆಸ್‌ ವಿರೋಧಿಸುತ್ತಿದೆ. ಸಂಘಟನೆಯನ್ನು ವಿರೋಧಿಸಿದಷ್ಟೂ ಸಂಘಟನೆ ಇನ್ನಷ್ಠು ಬಲವಾಗಿ ಬೆಳೆಯುತ್ತಿದೆ ಎಂದರು.

ಬೆಳೆಯುತ್ತಿರುವ ಆರೆಸ್ಸೆಸ್‌

ಈ ಹಿಂದೆ ಇಲ್ಲಿ ಐನೂರುಕ್ಕೆ ಸೀಮಿತವಾಗುತ್ತಿದ್ದ ಗಣವೇಷಧಾರಿಗಳು ಇಂದು ಐದು ಸಾವಿರ ದಾಟಲು ಕಾಂಗ್ರೆಸ್‌ ತೋರಿದ ಹಠವೇ ಕಾರಣ. ಇಲ್ಲಿ ಭಾಗವಹಿಸಿದ ಪ್ರತಿ ಗಣವೇಷಧಾರಿಗಳಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಮಾಜಿ ಸಂಸದರು ದೇಶದಲ್ಲಿ ರಾಹುಲ್‌ ಗಾಂಧಿಯಿಂದಾಗಿ ಬಿಜೆಪಿ ಬೆಳೆಯುತ್ತಿರುವ ಹಾಗೆ ರಾಜ್ಯದಲ್ಲಿ ಪ್ರಿಯಾಂಕ್‌ ಖರ್ಗೆಯಿಂದ ಆರ್‌.ಎಸ್‌.ಎಸ್‌. ಬೆಳೆಯುತ್ತಿದೆ ಎಂದರು.