RSS March-past Successful in Shivamogga
- ಸೀನಪ್ಪ ಶೆಟ್ಟಿ ವೃತ್ತದಲ್ಲಿ ಆರ್ಎಸ್ಎಸ್ ಪಥ ಸಂಚಲನಕ್ಕೆ ಪುಷ್ಪಾರ್ಚನೆ, ಸ್ವಾಗತಕನ್ನಡಪ್ರಭ ಶಿವಮೊಗ್ಗ
ವಿವಾದಗಳ ನಡುವೆಯೂ ಶಿವಮೊಗ್ಗ ನಗರದಲ್ಲಿ ಆರ್ಎಸ್ಎಸ್ ನಿಂದ ಹಮ್ಮಿಕೊಂಡಿದ್ದ ಬೃಹತ್ ಪಥಸಂಚಲನ ಯಶಸ್ವಿಯಾಗಿ ನಡೆಯಿತು.ಇತ್ತೀಚಿನ ದಿನಗಳಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಪಡೆವ ವಿಚಾರವಾಗಿ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪಥಸಂಚಲನ ನಡೆಸಲು ಕೇವಲ ಪತ್ರ ನೀಡಿದರೆ ಸಾಲದು, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆದಿರುವುದು ಗಮನ ಸೆಳೆದಿದೆ.ನಗರದ ಕೋಟೆ ಭಾಗದಿಂದ ಹಾಗೂ ಫ್ರೀಡಂ ಪಾರ್ಕ್ ಕಡೆಯಿಂದ ಆರ್ಎಸ್ಎಸ್ ಸ್ವಯಂಸೇವಕರ ಎರಡು ಪ್ರತ್ಯೇಕ ಪಥಸಂಚಲನಗಳು ಆರಂಭವಾದವು. ಕೋಟೆ ಭಾಗದಿಂದ ಹಾಗೂ ಫ್ರೀಡಂ ಪಾರ್ಕ್ ಕಡೆಯಿಂದ ಬಂದ ಎರಡೂ ಪಥಸಂಚಲನಗಳು ಸೀನಪ್ಪ ಶೆಟ್ಟಿ ವೃತ್ತದಲ್ಲಿ ಒಟ್ಟಿಗೆ ಸೇರಿದವು.
ಸೀನಪ್ಪಶೆಟ್ಟಿ ವೃತ್ತ ತಲುಪಿದ ಪಥಸಂಚಲನಕ್ಕೆ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಲಾಯಿತು.ಬಳಿಕ ಅಲ್ಲಿಂದ ಎನ್ಇಎಸ್ ಮೈದಾನದತ್ತ ಸಾಗಿದವು. ಎನ್ಇಎಸ್ ಮೈದಾನದಲ್ಲಿ ವಿಜಯದಶಮಿ ಬೌದ್ಧಿಕ ವರ್ಗ ನಡೆಯಿತು.
ಪಥ ಸಂಚಲನದಲ್ಲಿ 3 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗಿಯಾಗಿದ್ದರು. ಶಿವಮೊಗ್ಗ ನಗರದ 38 ಶಾಖೆಗಳಿಂದ ಸ್ವಯಂ ಸೇವಕರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಗಣವೇಷ ಧರಿಸಿದ್ದ ಒಂದೂವರೆ ವರ್ಷದ ಮಗು ಪಥ ಸಂಚಲನದಲ್ಲಿ ಗಮನ ಸೆಳೆಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.ಪಂಥ ಸಂಚಲನದಲ್ಲಿ ಕೆ.ಈ.ಕಾಂತೇಶ್ ಸೇರಿದಂತೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಕುಟುಂಬದ ಸದಸ್ಯರು, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ಸೇರಿದಂತೆ ಹಲವರು ಆರ್ಎಸ್ಎಸ್ ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
--ಪೊಟೋ: 25ಎಸ್ಎಂಜಿಕೆಪಿ07
ಶಿವಮೊಗ್ಗದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಆರ್ಎಸ್ಎಸ್ ಪಥ ಸಂಚಲನಕ್ಕೆ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಲಾಯಿತು.