ಆರ್‌ಎಸ್‌ಎಸ್‌ ಕಾರ್ಯಾಲಯ ಪ್ರೇರಣಾ ಕೇಂದ್ರ: ಮುಕುಂದ್‌

| Published : Dec 06 2024, 09:01 AM IST

ಸಾರಾಂಶ

ಸಂಘನಿಕೇತನ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾರ್ಯಾಲಯದ ಪ್ರವೇಶೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯ ಪ್ರೇರಣೆ ನೀಡುವ ತಪಸ್ಸಿನ ಕೇಂದ್ರ. ಮಂಗಳೂರಿನ ನೂತನ ಕಾರ್ಯಾಲಯ ಸಂಘದ ಕಾರ್ಯಕರ್ತರು, ಸಂಘಟನೆಗಳಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ನೀಡುವ ಕೇಂದ್ರವಾಗಿ ಬೆಳಗಲಿ ಎಂದು ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಮುಕುಂದ್ ಹೇಳಿದರು. ಕೇಶವ ಸ್ಮೃತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ನಗರದ ಸಂಘನಿಕೇತನದಲ್ಲಿ ನಿರ್ಮಾಣಗೊಂಡಿರುವ ನೂತನ ಸಂಘ ಕಾರ್ಯಾಲಯದ ಪ್ರವೇಶೋತ್ಸವ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.ಕಾರ್ಯಾಲಯ ಅಂದರೆ ಸಂಘಕ್ಕೆ ಕಚೇರಿ ಅಲ್ಲ, ವ್ಯವಹಾರ ನಡೆಸುವ ಜಾಗವೂ ಅಲ್ಲ. ಸಂಘದ ಕಾರ್ಯಾಲಯ ಸಮಾಜ, ದೇಶ, ಸ್ವಯಂಸೇವಕರಿಗೆ ಪ್ರೇರಣೆ ನೀಡುವ ಕ್ಷೇತ್ರ ಎಂದರು.

ಬದಲಾವಣೆಗೆ ಸದಾ ತೆರೆದ ಮನಸ್ಸು ಇರಬೇಕು. ಸಂಘ ಕಾಲಸಂಗತವಾಗಿದೆ. ವ್ಯಕ್ತಿತ್ವ ನಿರ್ಮಾಣದ ಜತೆಗೆ ಇತರ ಸಮಾಜ ಕಾರ್ಯವನ್ನು ಸಂಘ ಕಾಲಕ್ಕೆ ಅನುಗುಣವಾಗಿ ನಡೆಸುತ್ತಿದೆ. ಸಂಘದ ಈ ಹಿಂದಿನ ಕಾರ್ಯಾಲಯ ಕರಾವಳಿ ಮಾತ್ರವಲ್ಲದೆ ಕರ್ನಾಟಕದ ಅನೇಕ ಸ್ವಯಂಸೇವಕರಿಗೆ ಪ್ರೇರಣೆಯ ಕೇಂದ್ರವಾಗಿತ್ತು. ಹಿಂದಿನ ಕಾಲದಲ್ಲಿ ಕಾರ್ಯಾಲಯ ನಿರ್ಮಾಣ ಕಷ್ಟದ ಕೆಲಸವಾಗಿತ್ತು. ಸಂಘ ಅಪಹಾಸ್ಯ, ವಿರೋಧ, ಸ್ವೀಕೃತಿ ಬಳಿಕ ಇಂದು ಪ್ರಸಂಶೆ ಗಳಿಸುವ ಹಂತಕ್ಕೆ ತಲುಪಿದೆ. ಸಂಘದ ಜತೆ ಸಜ್ಜನ ಶಕ್ತಿ ಕಾರ್ಯನಿರ್ವಹಿಸುತ್ತಿದೆ. ಹಿರಿಯ ಕಾರ್ಯಕರ್ತರ ಸುಪ್ತ ಶಕ್ತಿಯೂ ಇದೆ ಎಂದು ಮುಕುಂದ್ ಹೇಳಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ್, ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ಡಾ.ಪಿ. ವಾಮನ ಶೆಣೈ, ಮಂಗಳೂರು ವಿಭಾಗ ಸಂಘಚಾಲಕ್ ಡಾ. ನಾರಾಯಣ ಶೆಣೈ ಇದ್ದರು.

ಕೇಶವ ಸ್ಮೃತಿ ಸಂವರ್ಧನ ಸಮಿತಿ ಕಾರ್ಯದರ್ಶಿ ಗಜಾನನ ಪೈ ಸ್ವಾಗತಿಸಿದರು. ಆರ್‌ಎಸ್‌ಎಸ್‌ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್‌ ನಿರೂಪಿಸಿದರು.

ಧಾರ್ಮಿಕ ವಿಧಿವಿಧಾನದೊಂದಿಗೆ ಪ್ರವೇಶೋತ್ಸವಸಂಘನಿಕೇತನ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾರ್ಯಾಲಯದ ಪ್ರವೇಶೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಆರ್‌ಎಸ್‌ಎಸ್‌ನ ಹಿರಿಯರಾದ ಸು. ರಾಮಣ್ಣ, ದಾ.ಮ.ರವೀಂದ್ರ, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಡಾ. ಕಲ್ಲಡ್ಕ ಪ್ರಭಾಕರ ಭಟ್, ನ.ಸೀತಾರಾಮ, ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಸಹಪ್ರಾಂತಪ್ರಚಾರಕ್ ನಂದೀಶ್, ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಭಾಗವಹಿಸಿದ್ದರು.