ರಾಮನಗರ: ನಾವು ಆರ್‌ಎಸ್ಎಸ್ ನೋಂದಣಿ ಮಾಡಿಸಿದ್ದರೆ ಅದರ ಪ್ರತಿ ಕೊಡಿ, ಇಲ್ಲದಿದ್ದರೆ ನೋಂದಣಿ ಮಾಡಿಸಿ ಎಂದು ಕೇಳುತ್ತಿದ್ದೇವೆ. ಪ್ರತಿ ಇದ್ದರೆ ಕೊಡಬೇಕು. ಅದು ಬಿಟ್ಟು ನೂರು ವರ್ಷದಿಂದ ನಮ್ಮನ್ನು ಯಾರೂ ಕೇಳಿಲ್ಲ. ನೀವು ಕೇಳಬಾರದು ಎಂದರೆ ಸಂಸ್ಥೆ ಯಾರಪ್ಪನ ಸ್ವತ್ತು ಅಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರದೀಪ್ ಈಶ್ವ‌ರ್ ವಾಗ್ದಾಳಿ ನಡೆಸಿದರು.

ವಂಡರ್ ಲಾ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆರವರು ನೋಂದಣಿ ದಾಖಲೆ ಕೇಳಿದರೆ, ಅವರ ವಿರುದ್ದ ಬಿಜೆಪಿ ನಾಯಕ ಅಶೋಕಣ್ಣ ಮತ್ತು ಸುನೀಲಣ್ಣ ಮನಬಂದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಸಬೇಕೆಂಬ ಕನಿಷ್ಠ ಜ್ಞಾನವಿಲ್ಲವೆ ಎಂದು ಕಿಡಿಕಾರಿದರು.

ಆರ್‌ಎಸ್‌ಎಸ್‌ ನೋಂದಣಿ ಕುರಿತು ಖರ್ಗೆ ಅವರು ಎತ್ತಿರುವ ಪ್ರಶ್ನೆ ಸರಿಯಾಗಿದ್ದು, ಅದನ್ನು ನಾವೆಲ್ಲರೂ ಬೆಂಬಲಿಸುತ್ತೇವೆ. ನಾವು ಸಂವಿಧಾನದ ವ್ಯವಸ್ಥೆಯಲ್ಲಿದ್ದೇವೆ. ನಾಳೆ ನಾವು ಸಹ ಸಂಘ- ಸಂಸ್ಥೆ ಕಟ್ಟಿಕೊಂಡು ನೋಂದಣಿ ಮಾಡಿಕೊಳ್ಳದೆ, ದಾನ ಧರ್ಮ ಮಾಡಿದರೆ, ಆದಾಯ ತೆರಿಗೆ ಕಟ್ಟದಿದ್ದರೆ ನೀವು ಸುಮ್ಮನಿರುತ್ತೀರಾ? ಅದೆಲ್ಲಾ ನಡೆಯುವುದಿಲ್ಲ ಎಂದು ಹೇಳಿದರು.

ಪ್ರಿಯಾಂಕ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಏನು ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಸುನೀಲಣ್ಣ ಕೇಳಿದ್ದಾರೆ. ಸುನೀಲಣ್ಣ ಅವರ ಕ್ಷೇತ್ರದ ಅಭಿವೃದ್ಧಿಗೂ ಪ್ರಿಯಾಂಕ್ ಅವರು ಅನುದಾನ ಕೊಟ್ಟಿದ್ದಾರೆ. ಅದಕ್ಕೆ ನಾನು ದಾಖಲೆ ಕೊಡುತ್ತೇನೆ. ಅಭಿವೃದ್ಧಿಗೆ ಇದಕ್ಕಿಂತ ಬೇರೆ ಸ್ಯಾಂಪಲ್ ಬೇಕಿಲ್ಲ ಎಂದು ಪ್ರದೀಪ್ ಈಶ್ವರ್ ತಿರುಗೇಟು ನೀಡಿದರು.