ಸಾರಾಂಶ
ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಬೂದಿಹೊಂಡದಿಂದ ಕಲುಷಿತ ನೀರು ಸಮೀಪದ ಕೃಷ್ಣಾ ಕೃಷ್ಣಾ ನದಿಗೆ ಸೇರುತ್ತಿದ್ದು, ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ತಾಲೂಕಿನ ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ (ಆರ್‌ಟಿಪಿಎಸ್)ದ ಹಾರುಬೂದಿ ಹೊಂಡದ ನೀರು ಹೆಚ್ಚಿನ ಪ್ರಮಾಣದಲ್ಲಿ ಸಮೀಪದ ಕೃಷ್ಣಾ ನದಿಗೆ ಸೇರುತ್ತಿದ್ದು, ಇದರಿಂದಾಗಿ ನದಿಪಾತ್ರದ ಜನರು ಭೀತಿಗೊಂಡು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.ಕೃಷ್ಣಾ ನದಿ ಸೇತುವೆ ಮೇಲ್ಭಾಗದಲ್ಲಿ ಆರ್‌ಟಿಪಿಎಸ್‌ನ ಹಾರುಬೂದಿ ಹೊಂಡದ ನೀರು ನದಿಗೆ ಹರಿಯುತ್ತಿದ್ದು, ಇದರಿಂದ ನದಿ ತೀರದ ನೀರೆಲ್ಲ ಕಲುಷಿತ ಗೊಳ್ಳುತ್ತಿದೆ. ದೇವಸೂಗೂರು ಸೇರಿ ಕೆಳಭಾಗದ ಗ್ರಾಮಗಳ ಜನರು ಹರಿದು ಬರುತ್ತಿರುವ ಇದೇ ನೀರನ್ನೇ ದೈನಂದಿನ ಚಟುವಟಿಕೆಗಳಿಗೆ ಬಳಸುತ್ತಿದ್ದು, ಹಾರುಬೂದಿ ಮಿಶ್ರಿತ ಹೊಂಡದ ನೀರಿನಿಂದಾಗಿ ಜನ ಸೇರಿ ಜಲಚರಗಳಿಗೂ ಸಮಸ್ಯೆಯಾಗುತ್ತಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಶಾಖೋತ್ಪನ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾರು ಬೂದಿಯು ಸೋನೆ ಮಳೆಯ ರೀತಿಯಲ್ಲಿ ಹರಡಿಕೊಂಡಿದ್ದರಿಂದ ಗ್ರಾಮಸ್ಥರು ಕಂಗಾಲಾ ಗಿದ್ದರು. ಇದೀಗ ಭಾರೀ ಪ್ರಮಾಣದ ನೀರು ಹೊಂಡು ನದಿಯನ್ನು ಸೇರಿಕೊಳ್ಳುತ್ತಿರುವುದು ಪರಿಸರದ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗುವಂತೆ ಮಾಡಿದೆ. ಆರ್‌ಟಿಪಿಎಸ್‌ನಿಂದ ಪದೇ ಪದೆ ಇಂತಹ ಎಡವಟ್ಟುಗಳ ಮರುಕಳಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ.