ಸಾರಾಂಶ
ರೈತರು ರಾಸುಗಳನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಮನ್ಮುಲ್ ಒಕ್ಕೂಟದಿಂದ ಶೇ.50ರ ಸಬ್ಸಡಿಯಲ್ಲಿ ರೈತರಿಗೆ ರಬ್ಬರ್ ಮ್ಯಾಟ್ ವಿತರಣೆ ಮಾಡಲಾಗುತ್ತಿದೆ.
ಪಾಂಡವಪುರ : ರಬ್ಬರ್ ಮ್ಯಾಟ್ ಹಾಗೂ ಮೇವು ಕತ್ತರಿಸುವ ಯಂತ್ರ (ಚಾಪ್‌ಕಟ್ಟರ್)ಗೆ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ವಿತರಿಸಲಾಗುವುದು ಎಂದು ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.
ತಾಲೂಕಿನ ದೊಡ್ಡಬ್ಯಾಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ಕಾರ್‍ಯಕ್ರಮದಲ್ಲಿ ರೈತರಿಗೆ ರಬ್ಬರ್ ಮ್ಯಾಟ್ ವಿತರಿಸಿ ಮಾತನಾಡಿ, ರೈತರು ರಾಸುಗಳನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಮನ್ಮುಲ್ ಒಕ್ಕೂಟದಿಂದ ಶೇ.50ರ ಸಬ್ಸಡಿಯಲ್ಲಿ ರೈತರಿಗೆ ರಬ್ಬರ್ ಮ್ಯಾಟ್ ವಿತರಣೆ ಮಾಡಲಾಗುತ್ತಿದೆ ಎಂದರು.
ರಬ್ಬರ್ ಮ್ಯಾಟ್ ಹಾಗೂ ಚಾಪ್‌ಕಟ್ಟರ್‌ಗೆ ರೈತರಿಂದ ಸಾಕಷ್ಟು ಬೇಡಿಕೆ ಇರುವುದರಿಂದ ಒಕ್ಕೂಟದ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಖರೀದಿಸಿ ರೈತರಿಗೆ ಹಂತಹಂತವಾಗಿ ವಿತರಣೆ ಮಾಡಲಾಗುವುದು ಎಂದರು.
ತಾಲೂಕಿಗೆ 2900 ರಬ್ಬರ್ ಮ್ಯಾಟ್‌ಗಳನ್ನು ಮಂಜೂರು ಮಾಡಲಾಗಿದೆ. ಈಗಾಗಲೇ 1500 ಮ್ಯಾಟ್ ಬಂದಿವೆ. ದೊಡ್ಡಬ್ಯಾಡರಹಳ್ಳಿ ವ್ಯಾಪ್ತಿಯ 14 ಡೇರಿಗಳಿಗೆ 300ಕ್ಕೂ ಅಧಿಕ ರಬ್ಬರ್ ಮ್ಯಾಟ್ ವಿತರಣೆ ಮಾಡಲಾಗುತ್ತಿದೆ ಎಂದರು.
ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಒಕ್ಕೂಟವು ಕಳೆದ 4 ವರ್ಷಗಳಿಂದಲೂ ರೈತರಿಗೆ ಸಬ್ಸಡಿ ದರದಲ್ಲಿ ರಬ್ಬರ್ ಮ್ಯಾಟ್ ವಿತರಿಸುತ್ತಿದೆ. ರೈತರಿಂದ ರಬ್ಬರ್ ಮ್ಯಾಟ್‌ಗೆ ಸಾಕಷ್ಟು ಬೇಡಿಕೆ ಇದೆ. ಒಕ್ಕೂಟದ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಅಧಿಕ ಉತ್ಪಾದಕ ರೈತರಿದ್ದಾರೆ. ಎಲ್ಲರಿಗೂ ಒಂದೇ ಬಾರಿ ಮ್ಯಾಟ್ ಖರೀದಿಸಿ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮ್ಯಾಟ್ ವಿತರಣೆ ಮಾಡಲಾಗುವುದು ಎಂದರು.
ಈ ವೇಳೆಮಾರ್ಗ ವಿಸ್ತರ್ಣಾಧಿಕಾರಿ ಜಗದೀಶ್, ಡೇರಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಸಣ್ಣಮ್ಮ, ನಿರ್ದೇಶಕರಾದ ಬೋರಮ್ಮ, ನಿಂಗರಾಜು, ಡಿ.ಎನ್.ಉಮೇಶ್, ಬಿ.ಎಂ.ನಿಂಗರಾಜು, ನಿಂಗಣ್ಣ, ಬ್ರಹ್ಮೇಶ್, ಪುಟ್ಟಸ್ವಾಮಿಶೆಟ್ಟಿ, ರತ್ನಮ್ಮ, ಪವಿತ್ರ ಕಾರ್‍ಯದರ್ಶಿ ಸಿ.ನಾಗೇಂದ್ರ ಸೇರಿದಂತೆ ವಿವಿಧ ಡೇರಿಗಳ ಕಾರ್‍ಯದರ್ಶಿಗಳು ಹಾಜರಿದ್ದರು.