ಸಾರಾಂಶ
ಭಟ್ಕಳ: ಪಟ್ಟಣದ ಕೋಟೇಶ್ವರ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹಾಕಲಾದ ಗುಜರಿ ರಾಶಿಯಿಂದ ಸಂಚರಿಸುವ ವಾಹನಗಳು ಮತ್ತು ಜನರಿಗೆ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ಈ ಗುಜರಿ ರಾಶಿಯನ್ನು ತೆಗೆಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.ಹೆದ್ದಾರಿಯಂಚಿನಲ್ಲಿಯೇ ಗುಜರಿ ರಾಶಿಗಳನ್ನು ಹಾಕಲಾಗಿದ್ದು, ಕೆಲವೊಮ್ಮ ಇದನ್ನು ಹೆದ್ದಾರಿಯ ಪಕ್ಕದಲ್ಲಿಯೇ ವಾಹನ ನಿಲ್ಲಿಸಿ ಲೋಡ್ ಮಾಡುವುದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ರಸ್ತೆಯಂಚಿನ ತನಕ ಗುಜರಿ ರಾಶಿ ಹಾಕಿದ್ದರೂ ಇನ್ನು ತನಕ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ.
ದಿನಂಪ್ರತಿ ಎಲ್ಲ ಸ್ತರದ ಅಧಿಕಾರಿಗಳು ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದರೂ ಹೆದ್ದಾರಿಯಂಚಿನ ಗುಜರಿ ರಾಶಿ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸವೇ ಸೈ. ಈ ಪ್ರದೇಶದಲ್ಲಿ ಅಪಘಾತ ಸಂಭವಿಸುತ್ತಿದ್ದು, ಮತ್ತಷ್ಟು ಅಪಘಾತ ಉಂಟಾಗುವ ಮೊದಲು ಹೆದ್ದಾರಿಯಂಚಿನ ಗುಜರಿ ರಾಶಿಯನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಅರ್ಧಂಬರ್ಧ ಸ್ಥಿತಿಯಲ್ಲಿದ್ದು, ಕಾಮಗಾರಿ ಇನ್ನೂ ಮುಗಿದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಹೆದ್ದಾರಿ ಕಾಮಗಾರಿ ಅರ್ಧಂಬರ್ಧ ಆಗಿರವುದು ಮತ್ತು ಹೆದ್ದಾರಿಯಂಚಿನಲ್ಲಿ ಎಲ್ಲಿಯೂ ಸಮರ್ಪಕ ಗಟಾರ ಕಾಮಗಾರಿ ಮಾಡದೇ ಇರುವುದರಿಂದ ಕಳೆದ ವರ್ಷದಂತೆ ಈ ವರ್ಷವೂ ಸಹ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗಿ ಅವಾಂತರವಾಗಲಿದೆ. ಐಆರ್ ಬಿ ಮತ್ತು ಹೆದ್ದಾರಿ ಪ್ರಾಧಿಕಾರದವರು ಕೋಟೇಶ್ವರ ನಗರದಲ್ಲಿ ಮಳೆಗಾಲದಲ್ಲಿ ಉಂಟಾಗುವ ಅವಾಂತರವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಹೆದ್ದಾರಿಯಂಚಿನ ಗುಜರಿರಾಶಿಯಿಂದ ವಾಹನಿಗರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.
ಭಟ್ಕಳದ ಕೋಟೇಶ್ವರ ನಗರದಲ್ಲಿ ಹೆದ್ದಾರಿಯಂಚಿನಲ್ಲಿರುವ ಗುಜರಿ ರಾಶಿ ಹಾಕಿರುವುದು.