ರಾಷ್ಟ್ರ, ರಾಜ್ಯದ ಅಭಿವೃದ್ಧಿಗೆ ರಡ್ಡಿ ಸಮಾಜದ ಕೊಡುಗೆ ಅಪಾರ: ಸಚಿವ ಪಾಟೀಲ

| Published : Dec 30 2023, 01:30 AM IST

ರಾಷ್ಟ್ರ, ರಾಜ್ಯದ ಅಭಿವೃದ್ಧಿಗೆ ರಡ್ಡಿ ಸಮಾಜದ ಕೊಡುಗೆ ಅಪಾರ: ಸಚಿವ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಯೋಗಿ ವೇಮನರ ದೇವಸ್ಥಾನ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಸಚಿವ ಎಚ್‌.ಕೆ.ಪಾಟೀಲ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಾಮಾಣಿಕರಾಗಿ ಸಮಾಜ ಸೇವೆಗೈದಿರುವ ರಡ್ಡಿ ಸಮಾಜದ ಹಿರಿಯರು ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನವನಗರದ ಸೆಕ್ಟರ್ ನಂ.6ರಲ್ಲಿ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ವತಿಯಿಂದ ನಿರ್ಮಾಣಗೊಳ್ಳಲಿರುವ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ದೇವಸ್ಥಾನ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಿಂದೆ ಬಾಗಲಕೋಟೆಯಲ್ಲಿ ದಿ.ರಾಮಣ್ಣ ಸೊನ್ನದ ಅವರು ಉಚಿತ ಪ್ರಸಾದ ನಿಲಯ ಪ್ರಾರಂಭಿಸಿ ಸಹಸ್ರಾರು ವಿದ್ಯಾರ್ಥಿಗಳ ಬದುಕನ್ನು ಬೆಳಗಿಸಿದ್ದರು. ಆ ಪರಂಪರೆ ಮುಂದುವರಿಸಿ ಬಡ ವಿದ್ಯಾರ್ಥಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಮುಂದಾಗಿರುವುದು ಅಭಿನಂದನಾರ್ಹ ಎಂದ ಸಚಿವರು, ರಚನಾತ್ಮಕ ಕಾರ್ಯಕ್ರಮಗಳು ಸಮಾಜ ಸಂಘಟನೆಯ ಜೊತೆಗೆ ಸಂಬಂಧಗಳನ್ನು ಬೆಸೆದು ಸಮಾಜಕ್ಕೆ ಒಳಿತನ್ನು ಮಾಡಲು ಅನುಕೂಲಕರವಾಗುತ್ತವೆ ಎಂದರು.

ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಮಾತನಾಡಿ, ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯೆ, ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಜೊತೆಗೆ ಸಮಾಜದ ನಾಯಕರು, ಪೂಜ್ಯರ ಮಾರ್ಗದರ್ಶನದಿಂದ ರಡ್ಡಿ ಸಮಾಜ ಸಂಘಟಿತಗೊಂಡು ಇಡೀ ಸಮಾಜಕ್ಕೆ ಒಳಿತಾಗುವ ಕಾರ್ಯನಡೆಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಹೇಮರಡ್ಡಿ ಮಲ್ಲಮ್ಮಳ ಬದುಕು ಇಡೀ ಸಮಾಜಕ್ಕೆ ಆದರ್ಶಪ್ರಾಯಾಗಿದೆ. ವೇಮನರು ಸಹ ತಮ್ಮ ತತ್ವ ಸಂದೇಶಗಳ ಮೂಲಕ ಜಗತ್ತಿಗೆ ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಪಾಲಿಸಿ ನಡೆಯಬೇಕು ಎಂದರು.

ಶಾಸಕ ಎಚ್.ವೈ.ಮೇಟಿ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹಾಗೂ ಮಾಜಿ ಶಾಸಕಿ ಸೌಮ್ಯರಡ್ಡಿ ಮಾತನಾಡಿ, ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಸಹಾಯ, ಸಹಕಾರದ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಆರ್.ಪಾಟೀಲ, ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ತತ್ವದಾರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿದಾಗ ದೇವಸ್ಥಾನ ನಿರ್ಮಾಣದ ಉದ್ದೇಶ ಸಫಲವಾಗುತ್ತದೆ ಎಂದರು.

ಎರೇಹೊಸಳ್ಳಿಯ ವೇಮನಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಚಾಮುಂಡೇಶ್ವರಿ ರಾಮಲಿಂಗಾರಡ್ಡಿ, ಸಂಸ್ಥೆಯ ಅಧ್ಯಕ್ಷ ಮಹೇಶ ಕಕರಡ್ಡಿ, ಉಪಾಧ್ಯಕ್ಷೆ ಶೋಭಾ ಕಟಗೇರಿ, ಡಾ.ಜಿ.ಆರ್. ಹಲಗಲಿ, ನಾರಾಯಣ ಹಾದಿಮನಿ, ಎಸ್.ಬಿ. ಮಾಚಾ, ಸುರೇಶ ನಾಲತವಾಡ, ಪಾಂಡು ಸನ್ನಪ್ಪನವರ, ಸಂಸ್ಥೆಯ ನಿರ್ದೇಶಕರು ವೇದಿಕೆಯಲ್ಲಿದ್ದರು.