ಸಾರಾಂಶ
ಆದಿವಾಲ ಗ್ರಾಮದ ರುದ್ರಭೂಮಿ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ರುದ್ರಭೂಮಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಆದಿವಾಲ ಗ್ರಾಮದ ರುದ್ರಭೂಮಿ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮತ್ತು ತಹಸೀಲ್ದಾರ್ ರಾಜೇಶ್ ಕುಮಾರ್ ರವರು ಶನಿವಾರ ಮಧ್ಯಾಹ್ನ ಆದಿವಾಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಾಲ್ಕು ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ರುದ್ರಭೂಮಿ ಸಮಸ್ಯೆಯಿದ್ದು ಮರಣ ಹೊಂದಿದವರನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಅಂಚಿಗೆ ಹೂಳಲಾಗುತ್ತಿದೆ ಎಂದು ಜೂನ್ 14ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಆದಿವಾಲ ಗ್ರಾಮದ ತ್ರಿಯಂಬಕಮೂರ್ತಿ, ರಾಜಶೇಖರಯ್ಯ, ರವಿಶಂಕರ್ ರವರು ತಮ್ಮ ಜಮೀನನ್ನು ಸರ್ಕಾರದ ಮೊತ್ತಕ್ಕೆ ರುದ್ರಭೂಮಿಗೆ ನೀಡಲು ಒಪ್ಪಿದ್ದರು ಸಹ ರುದ್ರಭೂಮಿ ಮಂಜೂರು ಆಗುವುದು ತಡವಾಗಿತ್ತು. ಆದರೆ ಇದೀಗ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ರುದ್ರಭೂಮಿ ಸಮಸ್ಯೆಯನ್ನು ಇನ್ನೊಂದು ವಾರದೊಳಗೆ ಪರಿಹರಿಸುವುದಾಗಿ ಹೇಳಿದ್ದು ರುದ್ರಭೂಮಿ ಮಂಜೂರಾತಿ ಆದೇಶ ನೀಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತ್ರಿಯಂಬಕಮೂರ್ತಿ, ರವಿಶಂಕರ್, ಸುಭಾನ್ ಸಾಬ್, ಸೈಯದ್ ಮುನೀರ್, ಚಂದ್ರಶೇಖರ್, ವಿಎ ಲಕ್ಷ್ಮೀಪತಿ, ಮಲ್ಲಿಕಾರ್ಜುನ್, ಪ್ರಕಾಶ್, ನಾಗಣ್ಣ, ಸಾಕಮ್ಮ, ಇಂದ್ರಮ್ಮ ಮುಂತಾದವರು ಹಾಜರಿದ್ದರು.ಕನ್ನಡಪ್ರಭ ಪತ್ರಿಕೆಯಲ್ಲಿ ಬಂದ ವರದಿ ಪರಿಣಾಮವಾಗಿ ಇಂದು ಸುಮಾರು 20-30 ವರ್ಷದ ಸಮಸ್ಯೆ ಬಗೆಹರಿಯುವ ಸಮಯ ಬಂದಿದೆ. ರಸ್ತೆ ಪಕ್ಕ ಹೆಣ ಹೂಳುವ ಪರಿಸ್ಥಿತಿ ಇನ್ನಾದರೂ ನಿಲ್ಲಲಿದೆ ಎಂಬ ಆಶಾಭಾವನೆ ಮೂಡಿದೆ.
ಕಿರಣ್ ಪಟ್ರೆಹಳ್ಳಿ. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ