ಸಾರಾಂಶ
ಸಿದ್ದಪ್ಪಾಜಿ ಜಾತ್ರೆ ಪ್ರಯುಕ್ತ ಚಿಕ್ಕಲ್ಲೂರಲ್ಲಿ ಮಂಟೇಸ್ವಾಮಿ ಪರಂಪರೆ ನೀಲಗಾರ ಸಂಪ್ರದಾಯದಂತೆ ಒಕ್ಕಲುತನದ ಮನೆಯವರು ನೀಲಗಾರ ದೀಕ್ಷೆಯನ್ನು ಪಡೆದುಕೊಂಡರು.
ಹನೂರು: ಸಾಮರಸ್ಯ-ಭಾವೈಕ್ಯತೆ ಸಾರುವ ಸಿದ್ದಪ್ಪಾಜಿ ಜಾತ್ರೆ ಪ್ರಯುಕ್ತ ಚಿಕ್ಕಲ್ಲೂರಲ್ಲಿ ಹುಲಿ ವಾಹನ ಹಾಗೂ ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ಮುಡಿಸೇವೆ ಸಲ್ಲಿಸುವ ಮೂಲಕ ರೈತರು ಗುಡ್ಡ ಮಣಿ ಹಾಕಿಸಿಕೊಂಡರು.
ಚಿಕ್ಕಲ್ಲೂರು ಜಾತ್ರೆಯ ಎರಡನೇ ದಿನ ಹುಲಿ ವಾಹನ ಹಾಗೂ ಮೂರನೇ ದಿನ ರುದ್ರಾಕ್ಷಿ ಮಂಟಪೋತ್ಸವ ಅದ್ಧೂರಿ ನೆರೆವೇರಿತು. ಸಿದ್ದಪ್ಪಾಜಿ ದೇವಾಲಯದ ಮುಂಭಾಗ ಕಡಲೆ, ಪುರಿ, ಕಲ್ಲುಸಕ್ಕರೆ, ಕೊಬ್ಬರಿ, ಹಣ್ಣು-ಕಾಯಿ ಸೇರಿದಂತೆ ಸಿಹಿ ತಿಂಡಿ ತಿನಿಸುಗಳನ್ನು ಇಟ್ಟು ಪವಾಡಪುರುಷರನ್ನು ಸ್ಮರಿಸಿದರು.ಬೊಪ್ಪೆಗೌಡನಪುರ ಮಠದ ಬಿ.ಎಸ್.ಜ್ಞಾನನಂದ ಚೆನ್ನರಾಜೇ ಅರಸ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಾತ್ರಿ 8ಗಂಟೆ ಬಳಿಕ ತಮಟೆ ಸದ್ದಿನೊಂದಿಗೆ ಹುಲಿವಾಹನವನ್ನು ಹೆಗಲ ಮೇಲೆ ಹೊತ್ತು ಸಿದ್ದಪ್ಪಾಜಿ ದೇವಸ್ಥಾನದ ಸುತ್ತ ಪ್ರದಕ್ಷಣೆ ಹಾಕಿ ಹುಲಿವಾಹನೋತ್ಸವ ಸೇವೆಯನ್ನು ಟಿ.ನರಸೀಪುರ ತಾಲೂಕು ಮೇಡಳ್ಳಿ, ಕೆಂಡನಕೊಪ್ಪಲು ನರೆವೇರಿಸಿ ರುದ್ರಾಕ್ಷಿ ಮಂಟೋಪೋತ್ಸವಕ್ಕೆ ಚಾಲನೆ ನೀಡಿದರು.
ಈ ಸೇವೆಯನ್ನು ಕೊತ್ತನೂರು ಗ್ರಾಮಸ್ಥರು ಸಲ್ಲಿಸಿದ್ದು, ಉತ್ಸವವೂ ದೇವಾಲಯ ಸುತ್ತ ಮೆರವಣಿಗೆ ಜರುಗಿತು. ಈ ವೇಳೆ ನೆರೆದಿದ್ದ ಜನರು ಸಿದ್ದಪ್ಪಾಜಿ, ಮಂಟೇಸ್ವಾಮಿ ಪಾದಕ್ಕೆ ಜಯವಾಗಲಿ ಎಂದು ಹರ್ಷೋದ್ಘಾರ ವ್ಯಕ್ತಪಡಿಸಿದರು. ನೀಲಗಾರ ಕಂಡಾಯ ಸೇರಿದಂತೆ ಗುಡ್ಡರು ಬೆತ್ತ, ಜೋಳಿಗೆ ಹಿಡಿದು ಜಾಗಟೆ ಬಡಿಯುವ ಮೂಲಕ ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರನ್ನು ಕೊಂಡಾಡಿ ಸ್ಮರಿಸಿದರು.ನೀಲಗಾರ ದೀಕ್ಷೆ:
ಮಂಟೇಸ್ವಾಮಿ ಪರಂಪರೆ ನೀಲಗಾರ ಸಂಪ್ರದಾಯದಂತೆ ಒಕ್ಕಲುತನದ ಮನೆಯವರು ಹಿರಿಯ ಮಗನಿಗೆ ನೀಲಗಾರ ದೀಕ್ಷೆ ಕೊಡಿಸುವ ಪದ್ಧತಿ ಹಿಂದಿನಿಂದ ನಡೆದುಕೊಂಡು ಬಂದಿದೆ. ಬುಧವಾರ ಸಹ ನೂರಾರು ಮಂದಿ ನೀಲಗಾರ ದೀಕ್ಷೆ ಪಡೆದುಕೊಂಡರು. ಬಳಿಕ ಬಿಡಾರಗಳಲ್ಲಿ ಕಂಡಾಯಗಳಿಗೆ ಪೂಜಿ ಸಲ್ಲಿಸಿ ಭಿಕ್ಷೆಗೆ ತೆರಳಿ ನೆನಪಾರ್ತಾ ಹೇಳುವ ಮೂಲಕ ಮಂಟೇಸ್ವಾಮಿ ಪರಂಪರೆ ತತ್ವ ಸಂದೇಶವನ್ನು ಸಾಂಪ್ರದಾಯದಂತೆ ಸಾರಿದರು.ವಿಶೇಷ ಹೂವಿನ ಅಲಂಕಾರ:
ಉತ್ಸವ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡುವ ಮೂಲಕ ನೋಡುಗರ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಲಾಗಿತ್ತು. ಸಿದ್ದಪ್ಪಾಜಿ ದೇವಾಲಯಕ್ಕೂ ಸಹ ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.