ಸಾರಾಂಶ
- ವಿಧಾನ ಪರಿಷತ್, ರಾಜ್ಯ ಸಭೆಗೆ ಬಂಜಾರರ ನೇಮಿಸಲು ರಾಘವೇಂದ್ರ ನಾಯ್ಕ ಆಗ್ರಹ ।
- - - ಕನ್ನಡಪ್ರಭ ವಾರ್ತೆ ದಾವಣಗೆರೆಹಾವೇರಿ ಶಾಸಕ, ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ನೀಡುವಂತೆ ಕರ್ನಾಟಕ ಬಂಜಾರ ಲಂಬಾಣಿ ಜನಜಾಗೃತಿ ಅಭಿಯಾನ ಸಮಿತಿ, ಕರ್ನಾಟಕ ಬಂಜಾರ ಲಂಬಾಣಿ ಹಕ್ಕು ಹೋರಾಟ ಸಮಿತಿ, ಹಾಗೂ ಜಿಲ್ಲಾ ಬಂಜಾರ (ಲಂಬಾಣಿ) ಸಮುದಾಯಗಳ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ, ಹಿರಿಯ ವಕೀಲ ರಾಘವೇಂದ್ರ ನಾಯ್ಕ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಲಂಬಾಣಿ ಸಮುದಾಯ ನೀಡಿದ ಬೆಂಬಲವನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಇಂತಹ ಸಮುದಾಯಕ್ಕೆ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡದಿರುವುದು ಸಮಾಜಕ್ಕೆ ಬೇಸರದ ಸಂಗತಿ ಎಂದರು.ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬ ಲಂಬಾಣಿ ಸಚಿವರೂ ಇಲ್ಲದ ಸಂಪುಟ ಇದಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 2 ವರ್ಷವಾಗುತ್ತಿದ್ದರೂ ಸಮಾಜಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕಾರ್ಮಿಕ, ಶ್ರಮಿಕರಾಗಿ ಸಂಕಷ್ಟದ ಬಾಳನ್ನು ಬಂಜಾರರು ಬಾಳುತ್ತಿದ್ದಾರೆ. ಉದ್ಯೋಗ ಭದ್ರತೆ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದ ಲಂಬಾಣಿ ಜನಾಂಗದ ಪರವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವವರೇ ಇಲ್ಲದಂತಾಗಿದೆ ಎಂದು ಹೇಳಿದರು.ಎಐಸಿಸಿ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಸಂಪುಟ ವಿಸ್ತರಣೆ ವೇಳೆ ಬಂಜಾರ ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ, ಬಂಜಾರರ ಬಗ್ಗೆ ತಾತ್ಸಾರ, ನಿರ್ಲಕ್ಷ್ಯ ಕಾಂಗ್ರೆಸ್ ತೋರುತ್ತಿರುವುದು ಸರಿಯಲ್ಲ. ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾಜದ ಮಹಾಮಠ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ, ಕಾರ್ಯದರ್ಶಿ ಅರುಣಕುಮಾರ ನರೇನಹಳ್ಳಿ, ಪಾಲಿಕೆ ಸದಸ್ಯ ಮಂಜಾನಾಯ್ಕ, ಎನ್.ವೆಂಕಟೇಶ ನಾಯ್ಕ, ಆಲೂರು ಹಟ್ಟಿ ಗಂಗಾನಾಯ್ಕ, ವೆಂಕಟೇಶ ನಾಯ್ಕ ಇತರರು ಇದ್ದರು.- - -
* (ಪಾಯಿಂಟ್ಸ್)- ವಿಧಾನ ಪರಿಷತ್ತಿನಲ್ಲಿ 3-4 ಸದಸ್ಯ ಸ್ಥಾನಗಳು ಖಾಲಿಯಿದ್ದು, 1 ಸ್ಥಾನದಲ್ಲಿ ಲಂಬಾಣಿ ಸಮಾಜಕ್ಕೆ ಅವಕಾಶ ನೀಡಬೇಕು
- ರಾಜ್ಯಸಭೆಗೆ ಕರ್ನಾಟಕದಿಂದ ಬಂಜಾರ ಸಮಾಜದ ಒಬ್ಬರನ್ನು ಸದಸ್ಯರಾಗಿ ಆಯ್ಕೆ ಮಾಡಬೇಕು- ಲಂಬಾಣಿ ಸಮುದಾಯದ ಪ್ರಮುಖ ಮೂರೂ ಬೇಡಿಕೆಗಳನ್ನು ಕಾಂಗ್ರೆಸ್ ಹೈ ಕಮಾಂಡ್, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಪ್ರಥಮಾದ್ಯತೆ ಮೇರೆಗೆ ಈಡೇರಿಸಬೇಕು
- ಸಮಾಜದ ಬೇಡಿಕೆಗಳ ಬಗ್ಗೆ ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇದಕ್ಕೆ ತಕ್ಕ ಬೆಲೆ ತೆರಬೇಕಾಗುವುದು- - -
ಕೋಟ್ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಉಪ ಸಭಾಪತಿ ಸ್ಥಾನ ಗೌರವಯುತವಾದ ಸ್ಥಾನವಾದರೂ, ನಮ್ಮ ಸಮುದಾಯದ ಧ್ವನಿಯಾಗಿ ನಿಲ್ಲಲು ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ, ಇಡೀ ರಾಜ್ಯವ್ಯಾಪಿ ಲಂಬಾಣಿ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ದ ತಪ್ಪು ಸಂದೇಶ ನೀಡಿದಂತಾಗುತ್ತದೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ರುದ್ರಪ್ಪ ಲಮಾಣಿಗೆ ಮೊದಲು ಸಚಿವ ಸ್ಥಾನ ನೀಡಿ
- ರಾಘವೇಂದ್ರ ನಾಯ್ಕ, ಹಿರಿಯ ಮುಖಂಡ- - - -15ಕೆಡಿವಿಜಿ1:
ದಾವಣಗೆರೆಯಲ್ಲಿ ಬುಧವಾರ ಲಂಬಾಣಿ ಸಮುದಾಯದ ಹಿರಿಯ ಮುಖಂಡ, ವಕೀಲ ರಾಘವೇಂದ್ರ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.