ರುದ್ರೇಗೌಡರ ಆದರ್ಶಗಳು ಯುವಜನಕ್ಕೆ ದಾರಿದೀಪ: ಯಡಿಯೂರಪ್ಪ

| Published : Jan 28 2024, 01:19 AM IST

ಸಾರಾಂಶ

ಹಿರಿಯ ಮುತ್ಸದ್ದಿ, ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ 75ನೇ ವರ್ಷಕ್ಕೆ ಕಾಲಿಟ್ಟಿರುವ ನೆನಪಿಗೆ ಶಿವಮೊಗ್ಗ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್‌ ಹಾಲ್‌ನಲ್ಲಿ ಶನಿವಾರ ‘ಅಮೃತಮಯಿ’ ಶೀರ್ಷಿಕೆಯಡಿ ಅಭಿನಂದನಾ ಕಾರ್ಯಕ್ರಮ ನೆರವೇರಿತು.

- ‘ಅಮೃತಮಯಿ’ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅಭಿಮತ । ದಿ ಐರನ್‌ ಮ್ಯಾನ್‌ ಕೃತಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮನುಷ್ಯನಿಗೆ ವಯಸ್ಸು ದೇಹಕ್ಕೆ ಹೊರತೆ ಮನಸ್ಸಿಗಲ್ಲ ಎಂಬುದಕ್ಕೆ ರುದ್ರೇಗೌಡರೇ ಸಾಕ್ಷಿ. ಹಿರಿಯ ಮುತ್ಸದ್ದಿಯಾಗಿರುವ ಅವರ ಜೀವನದ ಆದರ್ಶಗಳು ಯುವಜನತೆಗೆ ದಾರಿದೀಪ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್‌ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವ್ಯಕ್ತಿ ಶ್ರೀಮಂತ, ವಿದ್ಯಾವಂತ, ಪ್ರತಿಭಾವಂತನಾಗಿದ್ದಾನೆ ಎಂದ ಮಾತ್ರಕ್ಕೆ ಅವರನ್ನು ಪರಿಗಣಿಸುವುದಿಲ್ಲ. ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರನ್ನು ಮಾತ್ರ ಸಮಾಜ ಪರಿಗಣಿಸುತ್ತದೆ. ಅಂತಹ ಸೇವೆಯಿಂದ ವ್ಯಕ್ತಿಯ ಗೌರವ ಹೆಚ್ಚುತ್ತದೆ ಎಂದು ಹೇಳಿದರು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ರುದ್ರೇಗೌಡರವರು ವಿಶ್ವಕ್ಕೆ ಶಿವಮೊಗ್ಗವನ್ನು ತೋರಿಸಿದ ಮಹಾನ್‌ ವ್ಯಕ್ತಿ. 100 ವರ್ಷ ಬದುಕಲಿ ಇನ್ನೂ ಒಳ್ಳೆ ಹೆಸರು ಪಡೆಯಲಿ ಎಂದು ಶುಭಕೋರಿದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 75ನೇ ವರ್ಷಕ್ಕೆ ಕಾಲಿಟ್ಟಿರುವ ಎಸ್‌.ರುದ್ರೇಗೌಡರಂತ ಹಿರಿಯ ಬಗ್ಗೆ ಮಾತನಾಡಲು ನಾನು ಸಣ್ಣವನು. ಅವರ ಜೊತೆ ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರೊಟ್ಟಿಗೆ ಹೆಜ್ಜೆಯಿಡುವ ಸಂದರ್ಭ ಮಾನವೀಯ ಮೌಲ್ಯಗಳಿಗೆ ಆದ್ಯತೆ ಕೊಟ್ಟುಕೊಂಡು ಬಂದ ಸೂಕ್ಷ್ಮ ಸಭಾವದ ವ್ಯಕ್ತಿತ್ವವುಳ್ಳವರು ರುದ್ರೇಗೌಡ ಅವರು ಮೌಲ್ಯಯಾಧರಿತ ರಾಜಕೀಯ ಕ್ಷೇತ್ರದ ಕೆಲವೇ ಕೆಲವು ದಿಗ್ಗಜರ ಸಾಲಿನಲ್ಲಿ ಸೇರಿಕೊಂಡಿದ್ದಾರೆ ಎಂದು ವರ್ಣಿಸಿದರು.

ಯಾರಿಂದನಾದರೂ ಅವರಿಗೆ ನೋವಾಗಿದ್ದರೂ ಅದನ್ನು ತೋರಿಸಿಕೊಳ್ಳದೆ, ಅವರ ವಿರುದ್ಧ ಮುನಿಸಿಕೊಳ್ಳದೇ ಎಲ್ಲವನ್ನು ನುಂಗಿಕೊಂಡು ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಸಮಾಜಮುಖಿ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ. ತಾಯಿ ಹೃದಯದ ಎಲೆಮರೆ ಕಾಯಿಯಂತೆ ಅವರು ಅನೇಕ ಮಠ-ಮಂದಿರ ಗಳ ಏಳಿಗೆಗೆ ಶ್ರಮಿಸಿದ್ದಾರೆ. ಕೈಗಾರಿಕೆ ಕ್ಷೇತ್ರಕ್ಕೆ ಜೀವ ತುಂಬಿದವರು, ಕ್ಷೇತ್ರದ ಅಭಿವೃದ್ಧಿ ಶ್ರಮಿಸಿದ ಅವರು ಇಂದಿನ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಬಣ್ಣಿಸಿದರು. ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಅವರು ಅಭಿನಂದನಾ ನುಡಿಗಳನ್ನಾಡಿದ ಅವರು, ಎಸ್‌.ರುದ್ರೇಗೌಡ ಯಾವ ಸ್ಥಾನವನ್ನು ಅಪೇಕ್ಷೆ ಮಾಡದೇ ಕೊಟ್ಟಿದ್ದ ಜವಾಬ್ದಾರಿಯನ್ನೇ ಅಚ್ಚುಕಟ್ಟಾಗಿ ನಿಭಾಯಿಸಿದವರು. ಅವರು ರಾಜಕೀಯ ಜೀವನದಲ್ಲಿ ಅಜಾತಶತೃವಾಗಿ ಉಳಿದಿದ್ದಾರೆ ಎಂದರು. ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಧೀಶರಾದ ಶಿವರಾಜ್‌ ಪಾಟೀಲ್‌ ಮಾತನಾಡಿ, ಸ್ವಾಮಿ ವಿವೇಕನಂದರು ಹೇಳಿದಂತೆ ಇನ್ನೊಬ್ಬರಿಗಾಗಿ ಯಾರು ಬದುಕಿರುತ್ತಾರೆ ಅವರು ನಿಜವಾಗಿ ಬದುಕಿರುತ್ತಾರೆ. ಸಮಾಜಕ್ಕಾಗಿ ಬದುಕಿದವರು ಅಸ್ವಿತ್ವದಲ್ಲಿದ್ದು, ಇಲ್ಲದಂತೆ. ಅದರಂತೆ ಎಸ್‌.ರುದ್ರೇಗೌಡ ಅವರು ಇನ್ನೊಬ್ಬರಿಗಾಗಿ ಬದುಕಿದ್ದಾರೆ. ಪ್ರೀತಿ-ವಿಶ್ವಾಸ, ಶುಭಾಶಯಗಳೇ ಜೀವನದ ಸಂಪತ್ತು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ರುದ್ರೇಗೌಡರ ಬದುಕು-ಸಾಧನೆ ಕುರಿತ ‘ಎಸ್‌. ರುದ್ರೇಗೌಡ-ದಿ ಐರನ್‌ ಮ್ಯಾನ್‌’ ಪುಸ್ತಕವನ್ನು ಬಿಡುಗಡೆ ಮಾಡಿದರು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ವಿಧಾನಪರಿಷತ್‌ ಮಾಜಿ ಸದಸ್ಯ ಆಯನೂರು ಮಂಜುನಾಥ್‌, ಉದ್ಯಮಿ ಬಿ.ಸಿ.ನಂಜುಂಡ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ಭಾನುಪ್ರಕಾಶ್‌. ಎಸ್‌.ಎನ್‌.ಚನ್ನಬಸಪ್ಪ, ಡಿ.ಎಸ್‌.ಅರುಣ್‌, ಆರ್‌.ಕೆ.ಸಿದ್ದರಾಮಣ್ಣ, ಕೆ.ಬಿ.ಪ್ರಸನ್ನಕುಮಾರ್‌, ಪಟ್ಟಾಭಿರಾಮ್‌, ಎನ್‌.ಗೋಪಿನಾಥ್‌ , ಶಾಂತಮ್ಮ ಶಿವಣ್ಣಗೌಡ, ಡಿ.ಎಸ್‌.ಚಂದ್ರಶೇಖರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಎಸ್‌.ರುದ್ರೇಗೌಡರ ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ್‌ ಸರ್ಜಿ ಸ್ವಾಗತಿಸಿದರು.

‘ದಿ ಐರನ್‌ ಮ್ಯಾನ್‌’ ಕೃತಿ ಸಾಮಾಜಿಕ ದಾಖಲೆಯಾಗಿ ಉಳಿಯಲಿದೆ: ಬಿಎಸ್‌ವೈ

ಇಳಿವಯಸ್ಸಿನಲ್ಲೂ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ರುದ್ರೇಗೌಡ ಅವರ ಜೀವನ ಆದರ್ಶ ಹಾಗೂ ಅನುಕರಣೀಯವಾಗಿದೆ. ಎಸ್‌. ರುದ್ರೇಗೌಡ‘ದಿ ಐರನ್‌ ಮ್ಯಾನ್‌’ ಕೃತಿ ರುದ್ರೇಗೌಡಿಗೆ ಸಂದ ಗೌರವ. ಅವರ ಜೀವನ, ಬದುಕು, ಬರಹ ಮತ್ತು ಸಾಧನೆ ಕುರಿತು ಮುಂದಿನ ತಲೆಮಾರಿಗೆ ಪರಿಚಯಿಸುವ ಈ ಕಾರ್ಯಕ್ರಮ ಸಾಮಾಜಿಕ ದಾಖಲೆಯಾಗಿ ಶಾಶ್ವತವಾಗಿ ಉಳಿಯಲಿದೆ ಎಂದರು.

27ಎಸ್‌ಎಂಜಿಕೆಪಿ06: ಶಿವಮೊಗ್ಗ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್‌ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡರ ಅಮೃತಮಯಿ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ರುದ್ರೇಗೌಡ ಅವರನ್ನು ಅಭಿನಂದಿಸಲಾಯಿತು.