ಕುರುಗೋಡು ಬಳಿ ಶಿಲಾಯುಗದ್ದು ಎನ್ನಲಾದ ಅವಶೇಷಗಳು ಪತ್ತೆ

| Published : Oct 12 2023, 12:01 AM IST

ಕುರುಗೋಡು ಬಳಿ ಶಿಲಾಯುಗದ್ದು ಎನ್ನಲಾದ ಅವಶೇಷಗಳು ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮಿಪುರ ಗ್ರಾಮದ ಹೊರವಲಯದ ರಾಮತೀರ್ಥ ಬೆಟ್ಟದ ಕೆಳಗೆ ಶಿಲಾಯುಗಕ್ಕೆ ಸಂಬಂಧಿಸಿದ್ದು ಎನ್ನಲಾದ ವಿವಿಧ ಪ್ರಾಚ್ಯ ಅವಶೇಷಗಳು ಪತ್ತೆಯಾಗಿವೆ.
ಕನ್ನಡಪ್ರಭ ವಾರ್ತೆ ಕುರುಗೋಡು: ಪಟ್ಟಣ ಸಮೀಪದ ಲಕ್ಷ್ಮಿಪುರ ಗ್ರಾಮದ ಹೊರವಲಯದ ರಾಮತೀರ್ಥ ಬೆಟ್ಟದ ಕೆಳಗೆ ಶಿಲಾಯುಗಕ್ಕೆ ಸಂಬಂಧಿಸಿದ್ದು ಎನ್ನಲಾದ ವಿವಿಧ ಪ್ರಾಚ್ಯ ಅವಶೇಷಗಳು ಪತ್ತೆಯಾಗಿವೆ. ಲಕ್ಷಿಪುರದ ಹಳೇ ಭಟರಹಳ್ಳಿಯಲ್ಲಿನ ಐತಿಹಾಸಿಕ ದೇವಸ್ಥಾನದ ಬಳಿ ಕುರುಗೋಡಿನ ನಿವಾಸಿ ವೀರಭದ್ರಗೌಡ ಅವರಿಗೆ ಈ ಅವಶೇಷಗಳು ಕಂಡುಬಂದಿದ್ದು, ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಇತಿಹಾಸ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಎಚ್. ರವಿ ಅವರ ಸಹಕಾರದಿಂದ ಇವು ಶಿಲಾಯುಗಕ್ಕೆ ಸಂಬಂಧಿಸಿದ್ದವು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಇತಿಹಾಸ ತಜ್ಞರಿಂದ ಇವು ಯಾವ ಕಾಲದ ಅವಶೇಷಗಳು ಎಂದು ಖಚಿತವಾಗಿ ಗೊತ್ತಾಗಲಿದೆ. ಸುಮಾರು 500 ಮೀ.ಗಿಂತ ಎತ್ತರವಿರುವ ರಾಮತೀರ್ಥ ಬೆಟ್ಟದ ಮೇಲೆ 4 ಸ್ಥಳಗಳಲ್ಲಿ ಆದಿಮಾನವ ವಾಸ ಮಾಡಿರುವ ನೆಲೆ ಇರಬಹುದು ಎಂದು ಪತ್ತೆ ಹಚ್ಚಲಾಗಿದೆ. ಒಟ್ಟು ಬೆಟ್ಟದ ಮೇಲೆ ಆದಿಮಾನವ ವಾಸ ಮಾಡಿರುವ ಅಂದಾಜು 20 ಎಕರೆಯಷ್ಟು ಸ್ಥಳವಿದೆ ಎಂದು ಶೋಧಿಸಲಾಗಿದೆ. ಈ ಸ್ಥಳದಲ್ಲಿ ಕಿಪೂ 300ರಿಂದ 1500ರ ನೂತನ ಶಿಲಾಯುಗಕ್ಕೆ ಸೇರಿದ ಮಡಿಕೆಗಳು, ವಿವಿಧ ಅವಶೇಷಗಳು,ಶಿಲೆಯಿಂದ ತಯಾರಿಸಿದ ಮತ್ತು ಉಜ್ಜಿ ನುಣಪುಗೊಳಿಸಿದ 11.5 ಇಂಚು ಉದ್ದ ಹಾಗೂ 6 ಇಂಚು ಅಗಲವಿರುವ ಸುಮಾರು 11 ಕೊಡಲಿಗಳು, ಪ್ರಾಣಿ ಚರ್ಮ ತೆಗೆಯಲು ಬಳಸಿದ ಬ್ಲೇಡ್‌ಗಳು, ಪ್ರಾಣಿಗಳನ್ನು ಬೇಟೆಯಾಡಲು ಬಳಸಿರುವ 9 ಚೌಕಾಕಾರದ ಆಯುಧಗಳು, ನೂಣುಪುಗೊಳಿಸುವ ಗ್ರಾನೈಟ್ ಆಯುಧಗಳು, ಶಿಲಾಗೋರಿಗಳು ಪತ್ತೆಯಾಗಿವೆ. ಇನ್ನೂ ಅಲ್ಲಲ್ಲಿ ಗ್ರಾನೈಟ್ ಕಲ್ಲಿನಲ್ಲಿ ಸಣ್ಣ ತಗ್ಗನ್ನು ಮಾಡಿ ಆಯುಧಗಳನ್ನು ಉಜ್ಜಿರುವ ಕಲ್ಲುಗಳು, ಕಲ್ಲಾಸರೆಯಲ್ಲಿ ಬಿಡಿಸಿರುವ ಕೆಂಪು ವರ್ಣಚಿತ್ರಗಳು ಕಂಡುಬಂದಿವೆ. ಮಣ್ಣಿನಿಂದ ತಯಾರಿಸಿದ ನಂದಿ ವಿಗ್ರಹವಿರುವ ಗೊಂಬೆ ದೊರೆತಿದ್ದು, ಇದು ಅಂದಿನ ಧಾರ್ಮಿಕ ಜನಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ. ಎಚ್. ತಿಪ್ಪೇಸ್ವಾಮಿ, ಹಂಪಿ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಗೋವಿಂದ, ಹಂಪಿ ವಿದ್ಯಾರಣ್ಯದ ಕನ್ನಡ ವಿವಿಯ ದೃಶ್ಯಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣೇಗೌಡ ಅವರು ಕುರುಗೋಡು ಪಟ್ಟಣ ಸಮೀಪದಲ್ಲಿರುವ ಆದಿಮಾನವ ನೆಲೆಯ ಸ್ಥಳಕ್ಕೆ ಆಗಮಿಸಿ ಅಧ್ಯಯನ ನಡೆಸಿದ್ದಾರೆ.