ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಂದು ಆಡಳಿತ ನಡೆಸುತ್ತಿದ್ದ ರಾಜರು ತಾಯಿಯ ಗರ್ಭದಲ್ಲಿ ಜನಿಸಿದರೆ, ಇಂದು ಆಡಳಿತ ನಡೆಸುವವರು ಮತದಾನದ ಪೆಟ್ಟಿಗೆಯಲ್ಲಿ ಜನಿಸುತ್ತಾರೆ ಎಂದು ಮಾಜಿ ಸಚಿವ ಮತ್ತು ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ತಿಳಿಸಿದರು.ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ, ರಾಜ್ಯಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗಗಳು ಐಕ್ಯೂಎಸಿ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿಯ ಸಹಯೋಗದಲ್ಲಿ ಆಯೋಜಿಸಿದ್ದ ಮೈಸೂರು ಪ್ರಜಾಪ್ರತಿನಿಧಿ ಸಭೆ: ಚಾರಿತ್ರಿಕ ಅವಲೋಕನ ಕುರಿತ ಎರಡು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಲಂಡನ್ ನಲ್ಲಿ ಪ್ರಜಾಭುಭುತ್ವದ ಬಿತ್ತನೆ ಆರಂಭವಾಯಿತು. ಅಂತೆಯೇ 12ನೇ ಶತಮಾನದಲ್ಲಿಯೇ ಕರ್ನಾಟಕದಲ್ಲಿ ಬಸವಣ್ಣನವರ ಅನುಭವ ಮಂಟಪವು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿತು. ಅದರ ಪ್ರತಿರೂಪ ಎಂಬಂತೆ ಮೈಸೂರಿನಲ್ಲಿ ರಾಜರ ಆಡಳಿತದಲ್ಲಿ ಪ್ರಜಾಪ್ರತಿನಿಧಿ ಸಭೆಯು ಆರಂಭವಾಯಿತು ಎಂದರು.ಜವಾಬ್ದಾರಿ ಇಲ್ಲದೇ ಹಕ್ಕುಗಳನ್ನು ನೀಡಿದರೆ ಆ ಹಕ್ಕುಗಳು ಜವಾಬ್ದಾರಿಯುತವಾಗಿ ನಿರ್ವಹಿಸಲ್ಪಡುವುದಿಲ್ಲ. ಹಕ್ಕುಗಳ ಜೊತೆಗೆ ಜವಾವ್ದಾರಿಯು ಸಹ ಮುಖ್ಯವಾಗುತ್ತದೆ. ರಾಜನಾದವನು ನಿರಂಕುಶವಾದವನ್ನು ಬದಿಗೊತ್ತಿ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದ್ದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ ಎಂದು ಅವರು ಹೇಳಿದರು.
ಬ್ರಿಟನ್ ನಲ್ಲಿ ನಡೆದ ಹೋರಾಟ, ಹಿರೋಶಿಮಾ, ನಾಗಾಸಾಕಿಯಲ್ಲಿ ಬಿದ್ದ ಸೈನಿಕರ ನೆತ್ತರು ಪ್ರಜಾಪ್ರಭುತ್ವದ ಬುನಾದಿಯಾಗಿದೆ. ನಂತರದ ದಿನಗಳಲ್ಲಿ ವಿಶ್ವಸಂಸ್ಥೆಯು ಮಾನವ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿತು. ಕುವೆಂಪುರವರ ವಿಶ್ವಮಾನವ ಪರಿಕಲ್ಪನೆ ನಮಗೆಲ್ಲ ದಾರಿದೀಪ. ಇಂದು ಜನಸಾಮಾನ್ಯರಾದ ನಾವೆಲ್ಲರೂ ಹೋರಾಟದ ಪ್ರವೃತ್ತಿ, ಪ್ರಶ್ನಿಸುವ ಮನೋಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್. ಮಂಜುನಾಥ್ ಮಾತನಾಡಿ, ಪ್ರಜಾಪ್ರತಿನಿಧಿ ಸಭೆಯು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ. ನಾಡು- ನುಡಿಗೆ ಸಂಬಂಧಿಸಿದ ಮೂಲ ದಾಖಲೆಗಳ ಸಂರಕ್ಷಣೆ ನಮ್ಮೆಲ್ಲರ ಗುರುತರ ಜವಾಬ್ದಾರಿ ಎಂದರು.
ಈ ನಿಟ್ಟಿನಲ್ಲಿ ಐತಿಹಾಸಿಕ ದಾಖಲೆಗಳ ಮಹತ್ವದ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಪತ್ರಾಗಾರ ಇಲಾಖೆಯು ವಿಚಾರ ಸಂಕಿರಣ, ಪತ್ರಾಗಾರ ಕೂಟ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಶಿಕ್ಷಣ ವಿಭಾಗದ ಪ್ರೊ.ಆರ್. ಮೂಗೇಶಪ್ಪ, ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಇದ್ದರು. ಐಕ್ಯೂಎಸಿ ಸಂಯೋಜಕ ಡಾ.ಎನ್. ರಾಜೇಂದ್ರಪ್ರಸಾದ್ ನಿರೂಪಿಸಿದರು. ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸುವರ್ಣ ಕಂಬಿ ವರದಿ ಮಂಡಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಎನ್. ಚಂದನ್ ಕುಮಾರ ವಂದಿಸಿದರು.
‘ಪ್ರತಿಯೊಬ್ಬರೂ ತಮಗೆ ನೀಡಿರುವ ಹಕ್ಕುಗಳನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಹಾಗೂ ಕರ್ತವ್ಯಗಳನ್ನು ನಿರ್ವಹಿಸಬೇಕು. ಪ್ರಜ್ಞಾವಂತರಾಗಿ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಪ್ರತಿಯೊಂದು ಜೀವಿಗೂ ಘನತೆಯಿಂದ ಬದುಕುವ ಹಕ್ಕಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಇದನ್ನು ಅರಿತು ಮಾನವೀಯತೆಯ ದಾರಿಯಲ್ಲಿ ನಮ್ಮ ನಡೆ ಇರಬೇಕು.’- ಡಾ.ಸಿ.ಜಿ. ಬೆಟಸೂರಮಠ, ಕಾರ್ಯನಿರ್ವಾಹಕ ಕಾರ್ಯದರ್ಶಿ, ಜೆಎಸ್ಎಸ್ ಮಹಾವಿದ್ಯಾಪೀಠ