ಸಾರಾಂಶ
-ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ । ಎಸಿ ಕಮೀಟಿ ನೀಡಿದ ವರದಿ ಸಲಹೆ ಪಾಲಿಸದ ಕಂಪನಿಗಳು
- ಡಿಸಿ ಸಲಹೆಗಳನ್ನ ಅನುಷ್ಠಾನಗೊಳಿಸದ ಕಂಪನಿಗಳು- ಕನ್ನಡಪ್ರಭ ಸರಣಿ ವರದಿ ಭಾಗ : 136
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಖ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್-ತ್ಯಾಜ್ಯ ಕಂಪನಿಗಳು ಹೊರಸೂಸುತ್ತಿರುವ ವಿಷಗಾಳಿ ಹಾಗೂ ದುರ್ನಾತದಿಂದಾಗಿ ಇಲ್ಲಿನ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಸಹಾಯಕ ಆಯುಕ್ತರ ನೇತೃತ್ವದಲ್ಲಿ ರಚಿತಗೊಂಡಿದ್ದ ಕಮೀಟಿ ನೀಡಿದ್ದ ವರದಿಗಳಲ್ಲಿನ ಸಲಹೆಗಳನ್ನು ಕಂಪನಿಗಳು ಚರಂಡಿಗೆಸದಂತಿವೆ.ಸರ್ಕಾರದ ಷರತ್ತುಗಳ/ನಿಯಮಗಳ ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ನೋಟೀಸ್ ನೀಡಿ, ಬೀಗಮುದ್ರೆ ಹಾಕಿ, ಕಡ್ಡಾಯವಾಗಿ ಸಲಹೆಗಳನ್ನು ಪಾಲಿಸಬೇಕು ಎಂದು ಸಮಿತಿ ವರದಿಯಲ್ಲಿ ತಿಳಿಸಿತ್ತಾದರೂ, ಕೆಮಿಕಲ್ ಕಂಪನಿಗಳ ಅಟ್ಟಹಾಸಕ್ಕೆ ಕೊನೆಯಿಲ್ಲದಂತಾಗಿದೆ. ಜನ-ಜಲ ಜೀವನದ ಆರೋಗ್ಯದ ದೃಷ್ಟಿಯಿಂದ ಹಾಗೂ ಸರ್ಕಾರದ ನಿಯಮಾವಳಿಗಂತೆ ಡಿಸಿ-ಎಸಿ ಸಮಿತಿ ಸಲಹೆಗಳನ್ನೂ ಧಿಕ್ಕರಿಸುತ್ತಿರುವ ಕಂಪನಿಗಳು, ಜನರ ಜೀವಕ್ಕೆ ಕುತ್ತು ತರುತ್ತ ಮುನ್ನುಗ್ಗುತ್ತಿರುವುದು ಆತಂಕ ಮೂಡಿಸಿದೆ.
* ಹೇಳಿದ್ದೇನು ? ಆಗುತ್ತಿರುವುದೇನು?:"ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾಗಿ ಫಾರ್ಮಾ ಹಾಗೂ ಕೆಮಿಕಲ್ಸ್ ಕೈಗಾರಿಕೆಗಳು ಸ್ಥಾಪನೆಯಾಗಿರುವುದರಿಂದ ಅಗ್ನಿಶಾಮಕ ದಳವನ್ನು ಸ್ಥಾಪಿಸಲು ಅವಶ್ಯಕತೆ ಇರುತ್ತದೆ. "
ದುರಂತವೆಂದರೆ, ಕೈಗಾರಿಕಾ ಪ್ರದೇಶವಾಗಿ 14 ವರ್ಷಗರುಳಿದರೂ ಇಲ್ಲಿ ಅಗ್ನಿಶಾಮಕ ದಳ ಸ್ಥಾಪನೆಯಾಗಿಲ್ಲ. ಅನಾಹುತಗಳ ಘಟಿಸಿದ್ದ ವೇಳೆ 38 ಕಿ.ಮೀ ದೂರದ ಯಾದಗಿರಿಯಿಂದ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಬಹುಮಹಡಿ ಕಟ್ಟಡ ಅನುಮತಿ ಮುಂತಾದವುಗಳಿಗೆ ಅಗ್ನಿಶಾಮಕ ದಳದ ಅನುಮತಿ ಇಲ್ಲದೆ ಪರವಾನಗಿ ನೀಡಲಾಗುವುದಿಲ್ಲ. ಆದರಿಲ್ಲಿ, ಅಪಾಯಕಾರಿ ರಾಸಾಯನಿಕ ಕೆಮಿಕಲ್ ಕಂಪನಿಗಳಿರುವ ಇಂತಹ ಜಾಗೆಯಲ್ಲಿ, ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ದಳ ಸ್ಥಾಪನೆಯಾಗಿಲ್ಲ. ಇವರುಗಳಿಗೆ ಹೇಗೆ ಅನುಮತಿ ನೀಡಲಾಗುತ್ತಿದೆ ಅನ್ನೋದು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ತಾಜಾ ಉದಾಹರಣೆ ಅಂತಾರೆ ಜನರು."ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ನಿರಂತರ ಗಾಳಿಯ ಗುಣಮಟ್ಟ ವ್ಯವಸ್ಥೆ (CAAQMS)
ಸ್ಥಾಪಿಸಬಹುದಾಗಿರುತ್ತದೆ. "ಇದೂ ಸಹ ಪರಿಸರ ಅಧಿಕಾರಿಗಳ ಬೇಜವಾಬ್ದಾರಿತನದ ಉದಾಹರಣೆ. ಹಾಗೆ ನೋಡಿದರೆ, ಉದ್ದೇಶಪೂರ್ವಕಾಗಿಯೇ ಹಾಕಿಲ್ಲ, ಹವಾಮಾನ ಹದಗೆಟ್ಟ ಬಗ್ಗೆ ಜನರ ಗಮನಕ್ಕೆ ಬಂದರೆ ಕಂಪನಿಗಳ ವಿರುದ್ಧ ದನಿಯೆತ್ತಿಯಾರು ಎಂಬ ಕಾರಣಕ್ಕೆ ಅಧಿಕಾರಿಗಳೇ ಕಂಪನಿಗಳ ಪರ, ಜನರ ವಿರುದ್ಧ ಷಡ್ಯಂತ್ರ ರಚಿಸಿದಂತಿದೆ ಎಂಬ ಆರೋಪಳು ಕೇಳಿಬರುತ್ತಿವೆ.
"ಈ ಪ್ರದೇಶವು ಕೆಂಪು ಪ್ರವರ್ಗಕ್ಕೆ (Red Zone) ಬರುವುದರಿಂದ ಇಲ್ಲಿನ ಸರ್ಕಾರಿ ಉಪಕರಣ ಕೊಠಡಿ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಸ್ಥಳಾಂತರಿಸಲು ಸೂಚಿಸಲಾಗಿದೆ. "ಇದು ನಾಮ್ ಕೆ ವಾಸ್ತೆ ನೀಡಿದ ಸಲಹೆಯಂತಿದೆ. ಹಾಗೆ ನೋಡಿದರೆ, ರೆಡ್ ಝೋನ್ ಬರುವ ಮುನ್ನವೇ ಈ ಕೇಂದ್ರ ಇಲ್ಲಿ ಸ್ಥಾಪನೆಯಾಗಿತ್ತು. ಮಕ್ಕಳಿಗೆ ದುರ್ನಾತ, ವಿಷಗಾಳಿಯಿಂದ ರೋಗಗಳು ಆವರಿಸುತ್ತಿವೆ ಎಂದು ಪ್ರಾಂಶುಪಾಲರೇ ತಿಳಿಸಿದ್ದರು. ಆದರೆ, ಕಂಪನಿಗಳ ಏಜೆಂಟರಂತೆ ವರ್ತಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಅವರಿಗೆ ರೋಗ ವೈಯುಕ್ತಿಕ ಕಾರಣ ಎಂದು ಷರಾ ಬರೆದಿದ್ದರು. ಕೇಂದ್ರದ ಸ್ಥಳಾಂತರವಲ್ಲ, ಕೆಮಿಕಲ್ ಕಂಪನಿಗಳ ಬಂದ್ ಮಾಡುವ ಬದಲು, ಮಕ್ಕಳ ಜೀವದ ಜೊತೆ ಚೆಲ್ಲಾಟಕ್ಕೆ ಅಧಿಕಾರಿಗಳು ಇಳಿದಿದ್ದಾರೆಂದು ಜನರ ಆಕ್ರೋಶವಾಗಿದೆ. ಆಡಳಿತದ ಅನೇಕ ಸಲಹೆಗಳನ್ನು ಧಿಕ್ಕಿರಿಸುತ್ತಿರುವ ಕಂಪನಿಗಳು, ಇದ ಕೇಳಬೇಕಾದ ಆಡಳಿತದ ಮೌನ ಜಾಣ್ಮೆ ಜನರ ಬದುಕನ್ನೇ ಹಿಂಡುತ್ತಿದೆ.
ಕೋಟ್- 1 ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ರಾಸಾಯನಿಕ ಕಂಪನಿಗಳು ಸೇರಿದಂತೆ, ಇತರ ಕೈಗಾರಿಕೆಗಳಿಂದ ಕಾನೂನುಬಾಹಿರವಾಗಿ ಪರಿಸರಕ್ಕೆ ಹಾನಿಯಾಗುವ ತ್ಯಾಜ್ಯ ವಸ್ತು ಮತ್ತು ವಿಷಾನಿಲವನ್ನು ಹೊರಹಾಕುತ್ತಿರುವ ಪರಿಣಾಮದಿಂದ ಅನೇಕರಿಗೆ ಆರೋಗ್ಯ ಸಮಸ್ಯೆಯಾಗುತ್ತಿದೆ. ಇದನ್ನು ಗಮನಿಸಿದರೆ ಮುಂದಿನ ಪೀಳಿಗೆಯವರು ನಾನಾ ತೊಂದರೆಗಳಿಂದ ಅನುಭವಿಸುವುದು ಖಚಿತವಾದಂತೆ ಕಾಣುತ್ತಿದೆ. ಆದರಿಂದ ನಾವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಠಾಧೀಶರು, ಪರಿಸರವಾದಿಗಳು, ವೈದ್ಯರು ಮತ್ತು ಸಾಮಾಜಿಕ ಕಾಳಜಿಯುಳ್ಳವರ ತಂಡಗಳನ್ನು ಮಾಡಿಕೊಂಡು, ಮುಂಬರುವ ಚುನಾವಣೆಗಳನ್ನು ಬಹಿಷ್ಕಾರ ಮಾಡಬೇಕು ಮತ್ತು ಈ ಭಾಗದ ಮಕ್ಕಳಿಂದ ಹಿಡಿದು ಮಹಿಳೆಯರು ರಸ್ತೆಗಿಳಿದು ಉಗ್ರವಾದ ಹೋರಾಟಕ್ಕೆ ಮುಂದಾದರೆ ಮಾತ್ರ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವಿದೆ.- ದೇವಿಂದ್ರಪ್ಪ ಮಕ್ತಲ, ಬಾಡಿಯಾಳ. (21ವೈಡಿಆರ್10)
21ವೈಡಿಆರ್9 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.