ಸಾರಾಂಶ
ಪಾಲಬಾವಿ : ತಾಲೂಕಿನ ಹಂದಿಗುಂದ ಗ್ರಾಮದ ಹೊರವಲಯದ ಘಟಪ್ರಭಾ ಎಡದಂಡೆ ಕಾಲುವೆಯ ಪಕ್ಕದ ತೋಟಗಲ್ಲಿ ಕಳೆದ 7-8 ದಿನಗಳಿಂದ ಯಾವುದೋ ಪ್ರಾಣಿ ಮೇಕೆಗಳನ್ನು ತಿನ್ನುತ್ತಿದ್ದು, ಚಿರತೆ ಇರಬಹುದು ಎಂಬ ಶಂಕೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ವಕೀಲ ಸುರೇಶ ಹೊಸಪೇಟಿ ಸುದ್ದಿಗರರೊಂದಿಗೆ ಮಾತನಾಡಿ, 7-8 ದಿನಗಳ ಹಿಂದೆ ನಮ್ಮ ತೋಟದ ಹಾಗೂ ಅಕ್ಕಪಕ್ಕದ ತೋಟಗಳಲ್ಲಿ ರಾತ್ರಿ ಹೊತ್ತು 15ಕ್ಕೂ ಹೆಚ್ಚು ಮೇಕೆ ಹಾಗೂ ಮರಿಗಳನ್ನು ಚಿರತೆಯೋ ಅಥವಾ ಬೇರೆ ಯಾವುದೋ ಪ್ರಾಣಿ ತಿಂದು ಹಾಕುತ್ತಿದೆ. ತೋಟದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಸುರೇಶ ಹೊಸಪೇಟಿ ಎಂಬುವವರಿಗೆ ಸೇರಿದ ನಾಲ್ಕು ಮೇಕೆಗಳು, ಮಾರುತಿ ಮೇಟಿ, ಮಹಾದೇವಿ ಮೇಟಿ, ಕರೆಪ್ಪ ಮೇಟಿ, ರಾಮಪ್ಪ ಮಂಟೂರ, ಹಾಲಪ್ಪ ಮಂಟೂರ, ಲಕ್ಕಪ್ಪ ಪೂಜೇರಿ ಅವರಿಗೆ ಸೇರಿದ ತಲಾ ಎರಡು ಮೇಕೆ-ಮರಿಗಳು, ಶ್ರೀಕಾಂತ ಮೇಟಿ ಅವರಿಗೆ ಸೇರಿದ ಒಂದು ಮೇಕೆ ತೋಳದ ದಾಳಿಗೆ ಬಲಿಯಾಗಿವೆ ಎಂದು ಮಾರುತಿ ಮೇಟಿ, ಶ್ರೀಕಾಂತ ಮೇಟಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾದೇವ ಮೇಟಿ, ಸದಾಶಿವ ಬಡಿಗೇರ, ಸುರೇಶ ಹೊಸಪೇಟಿ, ವಲಯ ಅರಣ್ಯ ಸಿಬ್ಬಂದಿಗಳಾದ ಅರ್ಜುನ ಗೊಂಡೆ, ರಾಮು ಮುಂಜೆ, ಸಂಗಪ್ಪ ಪಿಡಾಯಿ, ಮಹಾದೇವ ಮೇಟಿ, ಕರೆಪ್ಪ ಮೇಟಿ, ಸಂಗಪ್ಪ ಸವದಿ, ಯಂಕಪ್ಪ ಪಿಡಾಯಿ, ಶಿವಾನಂದ ತಳವಾರ, ಹಾಲಪ್ಪ ಮೇಟಿ, ಆಕಾಶ ಮೇಟಿ ಇತರರು ಇದ್ದರು.ಹಂದಗುಂದ ಗ್ರಾಮದಲ್ಲಿ ಕಳೆದ 7-8 ದಿನಗಳಿಂದ ಚಿರತೆ ಬಂದು ಮೇಕೆ-ಮರಿಗಳನ್ನು ತಿನ್ನುತ್ತಿರುವ ವದಂತಿ ಹಬ್ಬಿದ್ದರಿಂದ ಹಂದಿಗುಂದ ಗ್ರಾಮದ ತೋಟಗಳಿಗೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿದ್ದು, ಚಿರತೆ ಬಂದ ಕುರುಹು ಇಲ್ಲ. ಹೆಜ್ಜೆ ಗುರುತುಗಳು ತೋಳಿನದಾಗಿದ್ದು, ರೈತರು ಹಾಗೂ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ, ಯಾರು ಆತಂಕ ಪಡಬಾರದು.
-ಸಂತೋಷ ಸುಂಬಳಿ, ತಾಲೂಕು ವಲಯ ಅರಣ್ಯಾಧಿಕಾರಿ ರಾಯಬಾಗ