ಕನ್ನಡಪ್ರಭ ವಾರ್ತೆ ಬೆಂಗಳೂರು
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮ ಪೆಟ್ರೋಲ್, ಡೀಸೆಲ್ ಅಭಾವ ಉಂಟಾಗಬಹುದು, ದರ ಏರಿಕೆಯಾಗಬಹುದು ಎಂಬ ವದಂತಿ ಹಿನ್ನೆಲೆಯಲ್ಲಿ ಬುಧವಾರವೂ ರಾಜ್ಯದ ಕೆಲವೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ವಾಹನ ಸವಾರರು ಮುಗಿಬಿದ್ದ ದೃಶ್ಯ ಕಂಡು ಬಂತು. ಧಾರವಾಡ, ಬೀದರ್, ಯಾದಗಿರಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವಂದತಿ ನಂಬಿದ ಜನ ಬಂಕ್‌ಗಳತ್ತ ಧಾವಿಸಿ ಬಂದು, ಪೆಟ್ರೋಲ್‌ಗಾಗಿ ಮುಗಿಬಿದ್ದರು.ಹುಬ್ಬಳ್ಳಿ-ಧಾರವಾಡದ ಪೆಟ್ರೋಲ್ ಬಂಕ್‌ಗಳಲ್ಲಿ ಭಾರಿ ಜನಜಂಗುಳಿ ನಿರ್ಮಾಣವಾಗಿದ್ದು, ಪೂರೈಕೆ ಕೊರತೆಯಿಂದ ಕೆಲವೆಡೆ ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿತ್ತು. ನಗರದ ಪೆಟ್ರೋಲ್ ಬಂಕ್ ವೊಂದರ ಮುಂದೆ ಸರದಿ ಸಾಲು ಮುರಿದ ವಿಚಾರವಾಗಿ ಯುವಕರ ನಡುವೆ ಮಾರಾಮಾರಿಯೇ ನಡೆಯಿತು. ಸುತ್ತಲಿದ್ದ ಜನ ಇಬ್ಬರ ಜಗಳ ಬಿಡಿಸಿದರು. ಈ ಮಧ್ಯೆ, ಜಿಲ್ಲಾಧಿಕಾರಿ ಆರ್.ಸ್ನೇಹಲ್ ಅವರು ಸುದ್ದಿಗೋಷ್ಠಿ ನಡೆಸಿ, ಧಾರವಾಡ ಜಿಲ್ಲೆಯಲ್ಲಿ ಯಾವುದೇ ಇಂಧನ ಕೊರತೆ ಇಲ್ಲ. ಪೆಟ್ರೋಲ್ ಬಂಕ್‌ಗಳ ಮುಂದೆ ಮುಗಿಬೀಳುವುದು ಬೇಡ. ಅಗತ್ಯವಿದ್ದಷ್ಟು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.
ಗಡಿ ಜಿಲ್ಲೆ ಬೀದರ್, ಕಲಬುರಗಿ ಜಿಲ್ಲೆ ವಾಡಿ, ರಾಯಚೂರಿನಲ್ಲೂ ಪೆಟ್ರೋಲ್ ಬಂಕ್‌ಗಳ ಮುಂದೆ ಕಿಲೋ ಮೀಟರ್‌ಗಟ್ಟಲೇ ಸುಡುವ ಬಿಸಿಲನ್ನೂ ಲೆಕ್ಕಿಸದೆ ಜನ ಸಾಲುಗಟ್ಟಿ ನಿಂತಿದ್ದರು. ಬಾಟಲ್, ವಾಟರ್ ಕ್ಯಾನ್‌ಗೆ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸಿಕೊಳ್ಳಲು ಜನ ಮುಂದಾಗಿದ್ದು, ನೀಡದಿದ್ದಾಗ ಬಂಕ್ ಸಿಬ್ಬಂದಿ ಜೊತೆ ವಾಗ್ವಾದ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯಾದಗಿರಿಯಲ್ಲಿ ಶುಭಂ, ಮುದ್ನಾಳ ಬಂಕ್ ಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ಇಂಧನ ಖರೀದಿಗೆ ಜನ ಮುಗಿಬಿದ್ದರು.ಗ್ಯಾಸ್ ಸಿಲಿಂಡರ್‌ಗೂ ಪರದಾಟ:
ಈ ಮಧ್ಯೆ, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಇದೇ ವೇಳೆ, ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಸಿಲಿಂಡರ್ ಏಜೆನ್ಸಿಯವರು, ₹50 ಹೆಚ್ಚಿಗೆ ಕೊಟ್ಟರೆ ಮಾತ್ರ ಸಿಲಿಂಡರ್ ನೀಡುತ್ತಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಕಳಿಸಿದರೂ ಆಹಾರ ಇಲಾಖೆ ಮತ್ತು ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕಲಬುರಗಿ ಜಿಲ್ಲೆ ಆಳಂದ ಪಟ್ಟಣದ ಸೋನಾ ಗ್ಯಾಸ್ ಏಜೆನ್ಸಿ ಮುಂದೆ ಅಡುಗೆ ಅನಿಲದ ಸಿಲಿಂಡರ್‌ಗಾಗಿ ಅರ್ಧ ಕಿ.ಮೀ. ಕ್ಯೂ ಇತ್ತು. ನಗದ 13 ಎಲ್‌ಪಿಜಿ ಬಂಕ್ ಪೈಕಿ ಅರ್ಧಕರ್ಧ ಮುಚ್ಚಿವೆ. ₹58 ಇದ್ದ ಎಲ್‌ಪಿಜಿ ದರ ₹85ಕ್ಕೆ ಏರಿಕೆ ಆಗಿದೆ. ರಾಯಚೂರಲ್ಲೂ ಎಲ್ಪಿಜಿ ಗ್ಯಾಸ್‌ಗಾಗಿ ಜನರ ಪರದಾಟ ಮುಂದುವರಿದಿದೆ.
ಕೊಪ್ಪಳದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ವೇಳೆ ವಾಣಿಜ್ಯ ಸಿಲಿಂಡರ್ ಸಿಗದೆ ಕಟ್ಟಿಗೆ ಒಲೆ ಮೇಲೆ ಅಡುಗೆ ಮಾಡಲಾಯಿತು. ಇದೇ ವೇಳೆ, ಕೊಪ್ಪಳದಲ್ಲಿ ಸಿಲಿಂಡರ್ ಅಭಾವದಿಂದ ಭಾರತ ಗ್ಯಾಸ್ ಏಜೆನ್ಸಿಗೆ ಬೀಗ ಹಾಕಲಾಗಿದ್ದು, ‘ಲೋಡ್ ಬಂದಿಲ್ಲ, ಗ್ರಾಹಕರೇ, ಸಹಕರಿಸಿ’ ಎಂದು ಬೋರ್ಡ್ ಹಾಕಲಾಗಿದೆ.