ಸಾರಾಂಶ
ಬೆಂಗಳೂರು-ಹೊಸಪೇಟೆ ಸಂಚರಿಸುವ ರೈಲು ಕುಷ್ಟಗಿ ವರೆಗೆ ಸಂಚರಿಸುವುದರಿಂದ ಯಲಬುರ್ಗಾ, ಕುಕನೂರು, ಕುಷ್ಟಗಿ ಸೇರಿದಂತೆ ಇಲಕಲ್, ಹುನಗುಂದ, ಗಜೇಂದ್ರಗಡ ಸಾರ್ವಜನಿಕರಿಗೆ ಬೆಂಗಳೂರಿಗೆ ರೈಲು ಪ್ರಯಾಣ ಕಡಿಮೆ ದರ, ಆರಾಮದಾಯಕ ಪ್ರಯಾಣವಾಗಲಿದೆ.
ಕುಷ್ಟಗಿ:
ತಾಲೂಕಿನ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಬೆಂಗಳೂರು-ಹೊಸಪೇಟೆ ರೈಲನ್ನು ಕೊಪ್ಪಳ, ತಳಕಲ್, ಕುಕನೂರು, ಯಲಬುರ್ಗಾ ಮೂಲಕ ಕುಷ್ಟಗಿ ವರೆಗೆ ವಿಸ್ತರಿಸಬೇಕೆಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಗೆ ಮನವಿ ಸಲ್ಲಿಸಿದರು.ಹೋರಾಟ ಸಮಿತಿಯ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಮಾತನಾಡಿ, ಬೆಂಗಳೂರು-ಹೊಸಪೇಟೆ ಸಂಚರಿಸುವ ರೈಲು ಕುಷ್ಟಗಿ ವರೆಗೆ ಸಂಚರಿಸುವುದರಿಂದ ಯಲಬುರ್ಗಾ, ಕುಕನೂರು, ಕುಷ್ಟಗಿ ಸೇರಿದಂತೆ ಇಲಕಲ್, ಹುನಗುಂದ, ಗಜೇಂದ್ರಗಡ ಸಾರ್ವಜನಿಕರಿಗೆ ಬೆಂಗಳೂರಿಗೆ ರೈಲು ಪ್ರಯಾಣ ಕಡಿಮೆ ದರ, ಆರಾಮದಾಯಕ ಪ್ರಯಾಣವಾಗಲಿದೆ ಎಂದರು.
ಪ್ರಸ್ತುತ ಕುಷ್ಟಗಿ ರೈಲು ನಿಲ್ದಾಣದಿಂದ ಹುಬ್ಬಳ್ಳಿಗೆ ಎಕ್ಸ್‌ಪ್ರೆಸ್ ರೈಲು ಒಂದೇ ಸಂಚರಿಸುತ್ತಿದ್ದು, ಇಡೀ ದಿನ ರೈಲು ನಿಲ್ದಾಣ ಖಾಲಿಯಾಗಿ ಭಣಗುಡುತ್ತಿದೆ. ಕುಷ್ಟಗಿ-ಹುಬ್ಬಳ್ಳಿ ರೈಲಿನ ಸಂಚಾರ ಸೇವೆಯ ಜತೆಗೆ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಿದರೆ ಅನುಕೂಲವಾಗಲಿದೆ. ಆಲಮಟ್ಟಿ-ಚಿತ್ರದುರ್ಗ, ದರೋಜಿ-ಬಾಗಲಕೋಟೆ ಅಂತಿಮ ಸಮೀಕ್ಷೆ ಅನುಮೋದನೆ ಕೈಗೊಂಡು ಮುಂದಿನ ಬಜೆಟ್‌ನಲ್ಲಿ ಸೇರಿಸಬೇಕೆಂದು ಮನವಿ ಮಾಡಿದರು.ಮನವಿ ಸ್ವೀಕರಿಸಿದ ಬಸವರಾಜ ರಾಯರೆಡ್ಡಿ, ಈ ಬೇಡಿಕೆ ಸೂಕ್ತವಾಗಿದ್ದು, ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹಾಗೂ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ಈ ವೇಳೆ ಕುಷ್ಟಗಿ ತಾಲೂಕು ರೈಲ್ವೆ ಹೋರಾಟ ಸಮಿತಿಯ ಮಹಾಂತೇಶ ಮಂಗಳೂರು, ಪುರಸಭೆ ಸದಸ್ಯ ಜೆ.ಜೆ. ಆಚಾರ್, ಸಂಗಣ್ಣ ಟೆಂಗಿನಕಾಯಿ, ಷರೀಫ್ ಸಾಬ್ ದಮ್ಮೂರು ಸೇರಿದಂತೆ ಅನೇಕರು ಇದ್ದರು.