ಸಾರಾಂಶ
ಚಾ.ನಗರ ಜಿಲ್ಲೆಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಕಾರ್ಯಕ್ರಮದ ಅಂಗವಾಗಿ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಂತೇಮರಹಳ್ಳಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್ ಗುರುವಾರ ಚಾಲನೆ ನೀಡಿದರು.
ಕನ್ನಡಪ್ರಭವಾರ್ತೆ ಚಾಮರಾಜನಗರ
ಜಿಲ್ಲೆಯಲ್ಲಿ ಜು.29 ರಿಂದ ಆ.14ರವರೆಗೆ ಹಮ್ಮಿಕೊಳ್ಳಲಾಗಿರುವ ಕುಷ್ಠರೋಗ ಪತ್ತೆ ಹಚ್ಚುವ ಕಾರ್ಯಕ್ರಮದ ಅಂಗವಾಗಿ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಂತೇಮರಹಳ್ಳಿಯಲ್ಲಿ ಗುರುವಾರ ಚಾಲನೆ ದೊರೆಯಿತು. ತಾಲೂಕಿನ ಸಂತೇಮರಹಳ್ಳಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್ ಕಂಜರ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲೆಯಾದ್ಯಂತ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ-2024 (ಎಲ್.ಸಿ.ಡಿ.ಸಿ) ಕಾರ್ಯಕ್ರಮವನ್ನು ಜು.29 ರಿಂದ ಹಮ್ಮಿಕೊಳ್ಳಲಾಗಿದೆ ಎಂದರು. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ತಮ್ಮ ದೇಹದ ಯಾವುದೇ ಭಾಗದಲ್ಲಿ ತಿಳಿಬಿಳಿ ತಾಮ್ರ ವರ್ಣದ ಅಥವಾ ಕೆಂಪುಮಿಶ್ರಿತ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಕಂಡು ಬಂದಲ್ಲಿ ಇದು ಕುಷ್ಠರೋಗದ ಲಕ್ಷಣವಾಗಿರುತ್ತದೆ. ಅಂತಹವರು ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರಿಂದ ತಪಾಸಣೆಗೆ ಒಳಪಡಬೇಕು. ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.ಕೈ ಕಾಲುಗಳಲ್ಲಿ ಜೋಮು ಹಿಡಿಯುವಿಕೆ, ಮುಖ ಮತ್ತು ಕಿವಿಗಳ ಮೇಲೆ ಎಣ್ಣೆ ಸವರಿದಂತ ಹೊಳಪು ಮತ್ತು ಗಂಟುಗಳು, ಕಣ್ಣು ರೆಪ್ಪೆ ಮುಚ್ಚಲು ಸಾಮರ್ಥ್ಯವಿಲ್ಲದಿರುವುದು, ಬಿಸಿ ಮತ್ತು ತಣ್ಣನೆಯ ವಸ್ತುಗಳನ್ನು ಮುಟ್ಟಿದಾಗ ಸ್ಪರ್ಶದ ಅರಿವಿಲ್ಲದಿರುವುದು, ಅಂಗೈ ಮತ್ತು ಪಾದಗಳಲ್ಲಿ ಬಲಹೀನತೆ ಇಂತಹ ಸಮಸ್ಯೆಗಳಿದ್ದಲ್ಲಿ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಕುಷ್ಠರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಆರಂಭಿಕ ಹಂತದಲ್ಲಿಯೇ ಕುಷ್ಠರೋಗ ಪತ್ತೆ ಹಚ್ಚುವ ಮೂಲಕ ಅಂಗವಿಕಲತೆ ತಪ್ಪಿಸಬಹುದು ಎಂದು ದೊರೆಸ್ವಾಮಿ ನಾಯಕ್ ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗಿರಿಜಾ ಶಂಕರ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಪುಟ್ಟದೇವಮ್ಮ, ಆಶಾ ಕಾರ್ಯಕರ್ತೆಯರು, ಬೀದಿ ನಾಟಕ ಕಲಾವಿದರಾದ ಶಾಂತರಾಜು, ನಟರಾಜು, ಮಹೇಶ್, ಜಯಗುರು, ಸುಶೀಲ, ಸಿದ್ದಣ್ಣ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.