ದಿನದಿಂದ ದಿನಕ್ಕೆ ಹೊಸಹೊಸ ರೂಪವನ್ನು ಪಡೆದುಕೊಂಡು ಜನರನ್ನು ಆಕರ್ಷಿಸುತ್ತಿರುವ ಫ್ಯಾಷನ್ ಪ್ರಪಂಚದತ್ತ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಿದ್ದಾರೆ. ಫ್ಯಾಷನ್ ಕೇವಲ ಬಟ್ಟೆ, ಹೇರ್‌ಸ್ಟೈಲ್‌ಗೆ ಸೀಮಿತಗೊಂಡಿಲ್ಲ. ಯುವಜನರ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸದ ಸಂಕೇತವಾಗಿ ಮಾರ್ಪಟ್ಟಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದಿನದಿಂದ ದಿನಕ್ಕೆ ಹೊಸಹೊಸ ರೂಪವನ್ನು ಪಡೆದುಕೊಂಡು ಜನರನ್ನು ಆಕರ್ಷಿಸುತ್ತಿರುವ ಫ್ಯಾಷನ್ ಪ್ರಪಂಚದತ್ತ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಿದ್ದಾರೆ. ಫ್ಯಾಷನ್ ಕೇವಲ ಬಟ್ಟೆ, ಹೇರ್‌ಸ್ಟೈಲ್‌ಗೆ ಸೀಮಿತಗೊಂಡಿಲ್ಲ. ಯುವಜನರ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸದ ಸಂಕೇತವಾಗಿ ಮಾರ್ಪಟ್ಟಿದೆ.ಇಂತಹ ಫ್ಯಾಷನ್ ಲೋಕದಲ್ಲಿ ಮಿಂಚಲು ಬಯಸುವ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ನಾಡಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯಾದ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಭಾನುವಾರ ‘ರನ್‌ವೇ ಫ್ಯಾಷನ್ ವೀಕ್ 2026’ ರೂಪದರ್ಶಿಗಳ ಆಡಿಷನ್ ಅನ್ನು ಕಾರ್ಲ್ಟನ್ ಮೀಡಿಯಾ ಈವೆಂಟ್ಸ್ ಸಹಯೋಗದಲ್ಲಿ ಅದ್ದೂರಿಯಾಗಿ ಆಯೋಜಿಸಿತ್ತು.
ನಗರದ ಕೋರಮಂಗಲದಲ್ಲಿರುವ ಶುಗರ್ ಫ್ಯಾಕ್ಟರಿ-ರೀಲೊಡೆಡ್ ಪಬ್‌ನಲ್ಲಿ ಆಯೋಜಿಸಲಾಗಿದ್ದ ರೂಪದರ್ಶಿಯರ ಆಡಿಷನ್‌ಗೆ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್‌ನ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಮತ್ತು ಕನ್ನಡಪ್ರಭದ ಸಂಪಾದಕ ಗಿರೀಶ್‌ರಾವ್ ಹತ್ವಾರ್ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ರವಿ ಹೆಗಡೆ ಅವರು, ಮೊದಲ ಸೀಸನ್‌ನ ಯಶಸ್ಸಿನ ಬಳಿಕ ಈ ಬಾರಿ ಎರಡನೇ ಸೀಸನ್‌ನಲ್ಲಿ ಮತ್ತಷ್ಟು ಹೆಚ್ಚಿನ ಉತ್ಸಾಹದಿಂದ ಮಾಡೆಲ್ಸ್ ಆಡಿಷನ್‌ಗೆ ಆಯೋಜಿಸಲಾಗಿದೆ. ಫ್ಯಾಷನ್ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಯುವ ಪ್ರತಿಭೆಗಳಿಗೆ ಮತ್ತು ಭವ ಭವಿಷ್ಯದ ಸಾಧಕರಿಗೆ ಈ ಕಾರ್ಯಕ್ರಮವು ಸರಿಸಾಟಿಯಿಲ್ಲದ ದೊಡ್ಡ ವೇದಿಕೆಯನ್ನು ಕಲ್ಪಿಸಲಿದೆ ಎಂದರು.
ಈ ಆಡಿಷನ್‌ನಲ್ಲಿ ಅಯ್ಕೆಯಾಗುವ ಅತ್ಯುತ್ತಮ ಸ್ಪರ್ಧಿಗಳಿಗೆ ವೃತ್ತಿಪರ ಮಾಡೆಲ್‌ಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಸುವರ್ಣ ಅವಕಾಶ ಸಿಗಲಿದೆ. ಈ ಫ್ಯಾಷನ್ ಶೋ ಕೇವಲ ನಡಿಗೆಯನ್ನು ಮಾತ್ರವಲ್ಲದೆ ಸ್ಪರ್ಧಿಗಳ ಆತ್ಮವಿಶ್ಲೇಷಣೆ, ವ್ಯಕ್ತಿತ್ವ ಮತ್ತು ಅವರ ವೈಯಕ್ತಿಕ ಸಾಧನೆಯ ಕಥೆಗಳನ್ನು ಹೊರತರುವ ಪ್ರಯತ್ನ ಮಾಡಲಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರು ನಗರವು ಫ್ಯಾಷನ್ ಕ್ಷೇತ್ರದಲ್ಲೂ ಮುಂಚೂಣಿ ಸಾಧಿಸಲಿದ್ದು, ಮುಂಬೈ ನಗರವನ್ನೂ ಮೀರಿಸುವ ಮಟ್ಟಿಗೆ ನಮ್ಮ ಯುವಕರು ಬೆಳೆಯಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಗಮನ ಸೆಳೆದ ರ್‍ಯಾಂಪ್ ವಾಕ್
ರನ್‌ವೇ ಫ್ಯಾಶನ್ ವೀಕ್ 2026 ಮಾಡೆಲ್ ಆಡಿಷನ್‌ಗೆ ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲ ಆಂಧ್ರ, ಕೇರಳ ರಾಜ್ಯಗಳಿಂದಲೂ ಯುವ ರೂಪದರ್ಶಿಗಳು ಆಗಮಿಸಿದ್ದರು. 16 ವರ್ಷದಿಂದ 37 ವರ್ಷದೊಳಗಿನ ಸುಮಾರು 54 ಮಂದಿ ರೂಪದರ್ಶಿಯರು ಶುಗರ್ ಫ್ಯಾಕ್ಟರಿ ಪಬ್‌ನಲ್ಲಿ ಕಲರ್‌ಫುಲ್ ಲೈಟ್ಸ್ ಹಾಗೂ ಅದ್ಧೂರಿ ಸ್ಟೇಜ್‌ನಲ್ಲಿ ಕ್ಯಾಟ್‌ವಾಕ್ ಮಾಡಿ ಗಮನ ಸೆಳೆದರು.ಯುವ ರೂಪದರ್ಶಿಯರು ಪ್ರದರ್ಶಿಸಿದ ಕ್ಯಾಟ್‌ವಾಕ್, ಆತ್ಮವಿಶ್ವಾಸ, ಬಾಡಿ ಲಾಂಗ್ವೇಜ್, ಫಿಟ್‌ನೆಸ್ ಸೇರಿದಂತೆ ಮುಂತಾದ ಅರ್ಹತೆಗೆ ಅನುಗುಣವಾಗಿ ಜ್ಯೂರಿಗಳಾದ ಬಸವರಾಜ್, ರಾಮ್, ಪ್ರಿಯಾ, ಪೂಜಾ ಅಂಕಗಳನ್ನು ನೀಡಿದ್ದು, ಶೀಘ್ರದಲ್ಲೇ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಕಟಿಸುವುದಾಗಿ ಆಯೋಜಕರು ಘೋಷಿಸಿದರು.