ಅಮೇರಿಕಾದಲ್ಲಿ ನಡೆದ ಬಸವಜಯಂತಿಯಲ್ಲಿ ರೂಪಾ ಕುಮಾರಸ್ವಾಮಿ ಉಪನ್ಯಾಸ

| Published : May 05 2025, 12:48 AM IST

ಸಾರಾಂಶ

ಬಸವಣ್ಣನವರು ಜೀವವಿರುವ ಪ್ರತಿಯೊಂದು ಜೀವಿಗೂ ಲೇಸನ್ನು ಬಯಸಿದುದರ ಪರಿಣಾಮ ಬಹುರೂಪಿ ಚೌಡಯ್ಯ ಅವರು ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ ಎಂದು ತಮ್ಮ ವಚನಗಳಲ್ಲಿ ಉಲ್ಲೇಖಿಸಿರುವುದು ಸಮಂಜಸವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಮೇರಿಕಾದ ವಿಎಸ್‌ಎನ್‌ಎ ಮತ್ತು ಬೆಂಗಳೂರಿನ ಬಸವಸಮಿತಿ ಸಹಯೋಗದಲ್ಲಿ ಅಂತರ್ಜಾಲದ ಮೂಲಕ ನಡೆದ ಅಂತಾರಾಷ್ಟ್ರೀಯ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮೈಸೂರನ್ನು ಪ್ರತಿನಿಧಿಸಿ ಬಸವಣ್ಣ ನಮ್ಮ ಸಾಂಸ್ಕೃತಿಕ ನಾಯಕ ಎಂಬ ವಿಷಯ ಕುರಿತು ಶರಣು ವಿಶ್ವವಚನ ಫೌಂಡೇಷನ್‌ ಸಂಸ್ಥಾಪಕ ವಚನ ಕುಮಾರಸ್ವಾಮಿ ಮತ್ತು ರೂಪಾ ಕುಮಾರಸ್ವಾಮಿ ಉಪನ್ಯಾಸ ನೀಡಿದರು.

ಬಸವಣ್ಣನವರು ಪ್ರತಿಪಾದಿಸಿದ ಜಾತಿ ಮತ್ತು ವರ್ಗರಹಿತ ಸಮಾಜ, ಕಾಯಕ ತತ್ವ, ಮಾನವ ಕುಲದ ಕಲ್ಯಾಣಕ್ಕೆ ನೀಡಿರುವ ಸಂದೇಶಗಳು ಸರ್ವಕಾಲಕ್ಕೂ ದಾರಿದೀಪ ಆಗಿರುವುದನ್ನು ಮನಗಂಡು ಕರ್ನಾಟಕ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಮಾನತೆಯ ತತ್ವಕ್ಕೆ ಮುನ್ನುಡಿ ಬರೆದಂತಾಗಿದೆ ಎಂದರು.

ವಿಶ್ವಗುರು ಬಸವಣ್ಣ ಅವರನ್ನು ಶರಣ ಬಹುರೂಪಿ ಚೌಡಯ್ಯ ಅವರು ತಮ್ಮ ಅನೇಕ ವಚನಗಳಲ್ಲಿ ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ ಎಂದು ಕೊಂಡಾಡಿದ್ದಾರೆ. ಈ ವಾಕ್ಯ ಅಕ್ಷರಶಃ ಸತ್ಯವಾದದ್ದು, ಏಕೆಂದರೆ ಅದುವರೆಗೆ ಸರ್ವೇ ಜನಾಃ ಸುಖಿನೋ ಭವಂತು ಎಂಬ ವಾಕ್ಯ ಎಲ್ಲರನ್ನೂ ಆಶೀರ್ವದಿಸುವ ವಾಕ್ಯವಾಗಿ ಜನಮನ್ನಣೆ ಪಡೆದಿತ್ತು. ಆದರೆ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಕಲಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು ಎಂಬ ವಾಕ್ಯವನ್ನು ಪ್ರಯೋಗ ಮಾಡುವುದರ ಮೂಲಕ ವಿಶ್ವದ ಭೂಪಟದಲ್ಲಿ ಶಾಶ್ವತ ಸ್ಥಾನ ಪಡೆದರು.

ಬಸವಣ್ಣನವರು ಜೀವವಿರುವ ಪ್ರತಿಯೊಂದು ಜೀವಿಗೂ ಲೇಸನ್ನು ಬಯಸಿದುದರ ಪರಿಣಾಮ ಬಹುರೂಪಿ ಚೌಡಯ್ಯ ಅವರು ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲಾ ಎಂದು ತಮ್ಮ ವಚನಗಳಲ್ಲಿ ಉಲ್ಲೇಖಿಸಿರುವುದು ಸಮಂಜಸವಾಗಿದೆ. ಬಸವಣ್ಣನವರು ಯಾರನ್ನೂ ಕೂಡಾ ಜಾತಿಯ ದೃಷ್ಟಿಯಲ್ಲಿ ನೋಡದೆ ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಆದಿಕವಿ ಪಂಪನ ಆಶಯವನ್ನು ನಿಜಗೊಳಿಸಿದ್ದಾಗಿ ತಿಳಿಸಿದರು.

ಜಾತಿ ಸೂತಕವನ್ನು ಕಳೆದುಕೊಳ್ಳಲು ನನ್ನ ತಂದೆ ಮಾದಾರ ಚನ್ನಯ್ಯ, ಚಿಕ್ಕಪ್ಪ ಡೋಹರ ಕಕ್ಕಯ್ಯ, ನಮ್ಮ ತಾತ ಚಿಕ್ಕಯ್ಯ, ನನ್ನ ಅಣ್ಣ ಕಿನ್ನರಿ ಬೊಮ್ಮಯ್ಯ ಎಂದು ಸಮಾಜಕ್ಕೆ ತಮ್ಮ ಪರಿಚಯ ಮಾಡಿಕೊಂಡು ಧ್ವನಿ ಇಲ್ಲದ ಜನರಿಗೆ ಧ್ವನಿಯಾದರು ಎಂದರು.

ಕಾರ್ಯಕ್ರಮದಲ್ಲಿ ವಿ.ಎಸ್.ಎನ್.ಎ ಅಧ್ಯಕ್ಷ ದಯಾನಂದ್‌ತುಮಕೂರು, ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ನಿಕಟಪೂರ್ವ ಅಧ್ಯಕ್ಷ ಹರೀಶ್‌ಹಿರೇಮಠ್‌, ನಿರ್ದೇಶಕ ಗಡಿಗೆಪ್ಪ ದೊಡ್ಡಮನಿ ಮೊದಲಾದವರು ಇದ್ದರು.