ಸಾರಾಂಶ
ಕಾರವಾರ: ನೌಕಾನೆಲೆ ನಿರಾಶ್ರಿತರಿಗೆ ಉದ್ಯೋಗ, ಸೂಕ್ತ ಸೌಲಭ್ಯ ಕಲ್ಪಿಸುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮೂಲಕ ರಕ್ಷಣಾ ಸಚಿವರಿಗೆ ರೂಪಾಲಿ ಎಸ್.ನಾಯ್ಕ ಮನವಿ ನೀಡಿದ್ದಾರೆ.ಅಂಕೋಲಾ ಬಳಿ ನೌಕಾನೆಲೆಯಿಂದ ನಾಗರಿಕ ಬಳಕೆಗೂ ಮುಕ್ತವಾಗಿರಲಿರುವ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಈ ವಿಮಾನ ನಿಲ್ದಾಣಕ್ಕೆ 93 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ಹಲವು ಕುಟುಂಬ ನಿರಾಶ್ರಿತವಾಗಲಿದೆ. ಈ ಹಿಂದೆ ನೌಕಾನೆಲೆಯಿಂದ ನಿರಾಶ್ರಿತವಾಗಿರುವ ಕುಟುಂಬ ಮತ್ತೊಮ್ಮೆ ನಿರಾಶ್ರಿತವಾಗಲಿದೆ. ಮಾನವೀಯತೆ ಹಿನ್ನೆಲೆಯಲ್ಲಿ ಈ ಕುಟುಂಬಗಳಿಗೆ ಅತಿ ಹೆಚ್ಚನ ಪರಿಹಾರ, ಪುನರ್ವಸತಿ, ಉದ್ಯೋಗ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕು. ನೌಕಾನೆಲೆ ನಿರಾಶ್ರಿತರಿಗೆ ಭೂಮಿ ನೀಡಿದಂತೆ ವಿಮಾನ ನಿಲ್ದಾಣ ನಿರಾಶ್ರಿತರಿಗೂ ತಲಾ 5 ಗಂಟೆ ಭೂಮಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸೀಬರ್ಡ್ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಿ, ನಿರಾಶ್ರಿತ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ನೀಡಬೇಕು. ಕಾರವಾರ ಹಾಗೂ ಅಂಕೋಲಾ ಈ ಎರಡೂ ತಾಲೂಕಿನ 4604 ಕುಟುಂಬಗಳು ನೌಕಾನೆಲೆಯಲ್ಲಿ ನಿರಾಶ್ರಿತವಾಗಿವೆ. 968 ಕುಟುಂಬಗಳಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಎಲ್ಲ 4 ಸಾವಿರಕ್ಕೂ ಹೆಚ್ಚು ನಿರಾಶ್ರಿತ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಹಾಗೂ ಇತರ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.ಸೀಬರ್ಡ್ ನೌಕಾನೆಲೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ನೌಕಾನೆಲೆಗೆ ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಇಲ್ಲಿ ಯಾವುದೆ ಕೈಗಾರಿಕೆಗಳಿಲ್ಲ. ಸ್ಥಳೀಯ ಜನತೆಗೆ ಉದ್ಯೋಗ ಕೊಡುವ ಕೈಗಾರಿಕೆಗಳೂ ಇಲ್ಲಿಲ್ಲ. ಈ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದಲ್ಲಿ ರಕ್ಷಣಾ ಇಲಾಖೆ ನೌಕಾನೆಲೆಯಲ್ಲಿ ಶಿಪ್ ಯಾರ್ಡ್ ಹಾಗೂ ಪೂರಕ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನೌಕಾಪಡೆಗೆ ಸಂಬಂಧಿಸಿದ ಕೈಗಾರಿಕೆ ಸ್ಥಾಪನೆಗೆ ಕಾರವಾರ ತಾಲೂಕಿನ ಮುಡಗೇರಿಯಲ್ಲಿ ಇರುವ ಭೂಮಿಯನ್ನು ಬಳಸಿಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.
ಸೀಬರ್ಡ್ ನಿರಾಶ್ರಿತರಿಗೆ ಮೂರು ದಶಕಗಳಿಂದ ಕಗ್ಗಂಟಾಗಿದ್ದ ಪರಿಹಾರವನ್ನು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ ಮೋದಿ ಅವರ ಮಾರ್ಗದರ್ಶನ, ಅಂದಿನ ರಕ್ಷಣಾ ಸಚಿವರಾಗಿದ್ದ ದಿ.ಮನೋಹರ ಪರಿಕ್ಕರ್, ಅಂದಿನ ಸಂಸದ ಅನಂತಕುಮಾರ್ ಹೆಗಡೆ ಅವರ ಪ್ರಯತ್ನದಿಂದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಕಾರವಾರಕ್ಕೆ ಆಗಮಿಸಿ ಪರಿಹಾರ ವಿತರಿಸಿದ್ದರು. ಈಚೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದಿಂದ ₹10.47 ಕೋಟಿ ಪರಿಹಾರ ಬಿಡುಗಡೆ ಮಾಡಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.ಪ್ರತಿ ಮಳೆಗಾಲದಲ್ಲಿ ಅರಗಾ, ಚೆಂಡಿಯಾ, ಅಮದಳ್ಳಿ, ತೋಡೂರು ಮತ್ತೆ ಕೆಲವು ಕಡೆಗಳಲ್ಲಿ ಗುಡ್ಡದಿಂದ ಹರಿದು ಬರುವ ನೀರು ಸರಾಗವಾಗಿ ಸಮುದ್ರಕ್ಕೆ ಹರಿದು ಹೋಗದೇ ಮನೆಗಳು ಜಲಾವೃತವಾಗುತ್ತಿವೆ. ಪ್ರಾಣ ಹಾನಿ, ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗುತ್ತಿದೆ. ನೌಕಾನೆಲೆ ವ್ಯಾಪ್ತಿಯಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ವಿನಂತಿಸಿದ್ದಾರೆ.