ಚನ್ನರಾಯಪಟ್ಟಣ ತಾಲೂಕಿನ ಬರಗೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮಹಿಳೆಯರಿಗಾಗಿ ಮಹಿಳಾ ಸಬಲೀಕರಣ ಕುರಿತು ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಉದ್ದೇಶ ಮಹಿಳೆಯರಲ್ಲಿ ತಮ್ಮ ಹಕ್ಕುಗಳು, ಜವಾಬ್ದಾರಿಗಳು, ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಕುರಿತು ಅರಿವು ಮೂಡಿಸುವುದಾಗಿತ್ತು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಬರಗೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮಹಿಳೆಯರಿಗಾಗಿ ಮಹಿಳಾ ಸಬಲೀಕರಣ ಕುರಿತು ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಉದ್ದೇಶ ಮಹಿಳೆಯರಲ್ಲಿ ತಮ್ಮ ಹಕ್ಕುಗಳು, ಜವಾಬ್ದಾರಿಗಳು, ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಕುರಿತು ಅರಿವು ಮೂಡಿಸುವುದಾಗಿತ್ತು.ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಮಹತ್ವವನ್ನು ವಿವರಿಸಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ಸ್ವಾವಲಂಬನೆ ಮಹಿಳೆಯರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಲಾಯಿತು. ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಸಣ್ಣ ಉದ್ಯಮಗಳು, ಆಹಾರ ಸಂಸ್ಕರಣೆ, ಹೈನುಗಾರಿಕೆ, ಪಶುಸಂಗೋಪನೆ, ಅಣಬೆ ಕೃಷಿ, ಹೊಲಿಗೆ ಹಾಗೂ ಇತರ ಆದಾಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಗೆ ಕೊಡುಗೆ ನೀಡಬಹುದು ಎಂಬುದನ್ನು ತಿಳಿಸಲಾಯಿತು. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಒಗ್ಗೂಡಿ ಉಳಿತಾಯ ಮಾಡುವುದರ ಜೊತೆಗೆ ವಿವಿಧ ಉದ್ಯೋಗ ಚಟುವಟಿಕೆಗಳನ್ನು ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಅವಕಾಶಗಳ ಕುರಿತು ಮಾಹಿತಿ ನೀಡಲಾಯಿತು. ಅಲ್ಲದೆ, ಮಹಿಳೆಯರು ತಮ್ಮ ಆರೋಗ್ಯ, ಪೌಷ್ಟಿಕತೆ, ವೈಯಕ್ತಿಕ ಸ್ವಚ್ಛತೆ ಹಾಗೂ ಕುಟುಂಬದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಲಾಯಿತು.
ಮಹಿಳೆಯರು ತಮ್ಮ ಕಾನೂನುಬದ್ಧ ಹಕ್ಕುಗಳು, ಸರ್ಕಾರಿ ಸೌಲಭ್ಯಗಳು, ಡಿಜಿಟಲ್ ಬ್ಯಾಂಕಿಂಗ್ ಮತ್ತು ಸೈಬರ್ ಸುರಕ್ಷತೆ ಕುರಿತು ಅರಿವು ಹೊಂದಿರುವುದು ಇಂದಿನ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ತಿಳಿಸಲಾಯಿತು. ಕುಟುಂಬ ಹಾಗೂ ಸಮಾಜದ ಪ್ರಮುಖ ನಿರ್ಧಾರಗಳಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಕೂಡ ವಿವರಿಸಲಾಯಿತು.ಕಾರ್ಯಕ್ರಮದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ಪ್ರಶ್ನೆಗಳನ್ನು ಕೇಳಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ‘ಸಬಲ ಮಹಿಳೆ - ಸಮೃದ್ಧ ಕುಟುಂಬ-ಸದೃಢ ಸಮಾಜ’ ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.