ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಡಿಜಿಟಲ್ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ಮಹಾವಿದ್ಯಾಲಯ ಹಾಗೂ ಲೊಯೋಲ ವಿಕಾಸ ಕೇಂದ್ರ, ಹಾನಗಲ್ ಅವರ ಸಹಯೋಗದಲ್ಲಿ ಇನಾಂ ನೀರಲಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಬೋರ್ಡ್ ವಿತರಿಸಲಾಯಿತು.
ಹಾನಗಲ್: ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಡಿಜಿಟಲ್ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ಮಹಾವಿದ್ಯಾಲಯ ಹಾಗೂ ಲೊಯೋಲ ವಿಕಾಸ ಕೇಂದ್ರ, ಹಾನಗಲ್ ಅವರ ಸಹಯೋಗದಲ್ಲಿ ಇನಾಂ ನೀರಲಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಬೋರ್ಡ್ ವಿತರಿಸಲಾಯಿತು.
ಸ್ಮಾರ್ಟ್ ಬೋರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ವಿನ್ಸೆಂಟ್ ಜೈಸನ್, ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಅಪಾರ ಪ್ರತಿಭೆ ಅಡಗಿದ್ದು, ಅವರಿಗೆ ಸೂಕ್ತ ಅವಕಾಶಗಳು ಹಾಗೂ ತಂತ್ರಜ್ಞಾನ ಆಧಾರಿತ ಕಲಿಕಾ ಸೌಲಭ್ಯಗಳನ್ನು ಒದಗಿಸಿದರೆ ಅವರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲರು ಎಂದರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ಮಕ್ಕಳೂ ಡಿಜಿಟಲ್ ಕಲಿಕೆಯಿಂದ ವಂಚಿತರಾಗಬಾರದು. ಪಠ್ಯ ವಿಷಯಗಳ ಜೊತೆಗೆ ಜೀವನ ಮೌಲ್ಯಗಳು, ಕೌಶಲ್ಯಗಳು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ವಿ. ಚಿನ್ನಿಕಟ್ಟಿ ಮಾತನಾಡಿ, ಸರ್ಕಾರವು ಈಗಾಗಲೇ ಶಾಲೆಗಳಿಗೆ ವಿವಿಧ ಡಿಜಿಟಲ್ ಕಲಿಕಾ ಸಾಧನಗಳನ್ನು ಒದಗಿಸುತ್ತಿದ್ದು, ಅವುಗಳ ಪರಿಣಾಮಕಾರಿ ಬಳಕೆ ಅತ್ಯಂತ ಮುಖ್ಯವಾಗಿದೆ. ಕಳೆದ ವರ್ಷ ಲೊಯೋಲ ವಿಕಾಸ ಕೇಂದ್ರವು ತಾಲೂಕಿನ ಹಲವು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ, ವಿಶೇಷವಾಗಿ ಶಾಲೆಗಳ ಸುಣ್ಣಬಣ್ಣಕ್ಕೆ ಸಹಕಾರ ನೀಡಿದ್ದು, ಈ ವರ್ಷವೂ ಸ್ಮಾರ್ಟ್ ಬೋರ್ಡ್ನಂತಹ ಆಧುನಿಕ ಕಲಿಕಾ ಸಾಧನವನ್ನು ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಕಲಿಕಾ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಆರ್.ಸಿ. ಡಿ ನಾಗೇಂದ್ರ, ಬಿ.ಎನ್. ಸಂಗೂರು, ಸಿ.ಆರ್.ಪಿ. ಇಮ್ರಾನ್ ಹಾನಗಲ್, ಲೊಯೋಲ ವಿಕಾಸ ಕೇಂದ್ರದ ಸಹ ನಿರ್ದೇಶಕರಾದ ಜೈಸನ್ ಪಾಯ್ಸ, ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು, ಗ್ರಾಮದ ಮುಖಂಡರು, ಮಹಿಳಾ ಸಂಘದ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಮಡಿವಾಳರ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.