ಬಾರಾಮತಿ ಕ್ಷೇತ್ರದ ಮಾದರಿಯಲ್ಲೇ ಗ್ರಾಮೀಣ ಕ್ಷೇತ್ರ ಅಭಿವೃದ್ಧಿ

| Published : Apr 27 2025, 01:48 AM IST

ಬಾರಾಮತಿ ಕ್ಷೇತ್ರದ ಮಾದರಿಯಲ್ಲೇ ಗ್ರಾಮೀಣ ಕ್ಷೇತ್ರ ಅಭಿವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ನಾಯಕ ಶರದ್ ಪವಾರ್ ಅಭಿವೃದ್ಧಿಪಡಿಸಿರುವ ಬಾರಾಮತಿ ಕ್ಷೇತ್ರದ ಮಾದರಿಯಲ್ಲೇ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆನ್ನುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖನಾಗಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ ರಾಷ್ಟ್ರೀಯ ನಾಯಕ ಶರದ್ ಪವಾರ್ ಅಭಿವೃದ್ಧಿಪಡಿಸಿರುವ ಬಾರಾಮತಿ ಕ್ಷೇತ್ರದ ಮಾದರಿಯಲ್ಲೇ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆನ್ನುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖನಾಗಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಯಳ್ಳೂರಿನಲ್ಲಿ ಶನಿವಾರ ನಡೆದ ಸ್ಥಳೀಯ ಮರಾಠಿ ಶಾಲೆಯ ಶತಕೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2013ರಲ್ಲಿ ಮೊದಲ ಬಾರಿಗೆ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಸಂದರ್ಭದಲ್ಲೇ ಬಾರಾಮತಿ ಮಾದರಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆನ್ನುವ ಕನಸು ಹೊತ್ತಿದ್ದೆ. ಅದೇ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. ಆದರೆ, ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವಾತಂತ್ರ್ಯ ಪೂರ್ವದಿಂದಲೇ ಶಿಕ್ಷಣ ಸೇವೆ ನೀಡುವ ಮಹತ್ವದ ಕೆಲಸವನ್ನು ಮಾಡುತ್ತ ಬಂದಿದೆ. ಇದು ಕೇವಲ ಶಾಲೆಯಲ್ಲ, ಇದೊಂದು ವಿದ್ಯಾ ಮಂದಿರ. ಇಲ್ಲಿ ಕಲಿತ ಹಲವರು ರಾಜ್ಯ, ರಾಷ್ಟ್ರ, ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಶತಕೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸುವರ್ಣ ಅವಕಾಶ ನನಗೆ ಸಿಕ್ಕಿದ್ದು ನನ್ನ ಸುದೈವ ಎಂದರು.ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಮಾಜಿ‌ ಕೇಂದ್ರ ಸಚಿವ ಶರದ್ ಪವಾರ, ಶಿವಾಜಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಮಾಣಿಕರಾವ್ ಸಾಳುಂಕೆ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ವಿಠ್ಠಲರಾವ್ ಹಲಗೇಕರ್, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅರವಿಂದ ಪಾಟೀಲ, ರಾವಜಿ ಪಾಟೀಲ, ಎ‌ನ್.ಡಿ.ಗೋರೆ, ಸತೀಶ್ ಪಾಟೀಲ, ಗ್ರಾಮದ ಹಿರಿಯರು, ಮಹಿಳೆಯರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಗ್ರರನ್ನು ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು: ಸಚಿವೆ ಲಕ್ಷ್ಮೀ

ಬೆಳಗಾವಿ: ದೇಶಕ್ಕೆ ಮಾರಕವಾಗಿರುವ ಉಗ್ರರನ್ನು ಮಟ್ಟಹಾಕಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಉಗ್ರರನ್ನು ಸದೆ ಬಡಿಯಲು ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡರೂ ಅದಕ್ಕೆ ಬೆಂಬಲ ನೀಡಲಾಗುವುದು. ಉಗ್ರರನ್ನು ಮಟ್ಟಹಾಕುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ನಮ್ಮ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಉಗ್ರರನ್ನು ಮಟ್ಟಹಾಕುವುದೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಅಮಾಯಕರಿಗೆ ವಂಚಿಸುತ್ತಿರುವುದು ನನ್ನ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಖುದ್ದು ನಾನೇ ದೂರು ನೀಡಿದ್ದೇನೆ ಎಂದು ಸಚಿವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ರಾಜಕೀಯ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದಿರುವ ನನ್ನಂತವರಿಗೆ ಶರದ್ ಪವಾರ ಅವರು ಆದರ್ಶರಾಗಿದ್ದಾರೆ. ಅವರಿಂದ ಬಹಳಷ್ಟು ಕಲಿತಿದ್ದೇನೆ. ಗ್ರಾಮೀಣ ಕ್ಷೇತ್ರದ ರಾಜಹಂಸಗಡದಲ್ಲಿ ಶಿವಾಜಿ ಪುತ್ಥಳಿ ಸ್ಥಾಪಿಸಿ ಅಭಿವೃದ್ಧಿಪಡಿಸಲಾಗಿದೆ. ಶರದ್ ಪವಾರ್ ಅವರು ಅಲ್ಲಿಗೆ ಒಮ್ಮೆ ಭೇಟಿ ನೀಡಬೇಕು.

-ಲಕ್ಷ್ಮೀ ಹೆಬ್ಬಾಳಕರ್, ಸಚಿವೆ.