ಸಾರಾಂಶ
ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಪದಾಧಿಕಾರಿಗಳ ಸಮಾವೇಶ
ಕನ್ನಡಪ್ರಭ ವಾರ್ತೆ ಕಾರ್ಕಳಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಭಾಗದ ಜನರ ಬಾಳಿಗೆ ಬೆಳಕಾಗಿದೆ. ಈ ಸಂಸ್ಥೆಯ ಜನಪರ ಯೋಜನೆಗಳಿಂದಾಗಿ ಯೋಜನೆಯ ಸದಸ್ಯರು ಸ್ವಾವಲಂಬಿಗಳಾಗಿ ಬದುಕುವಂತಾಗಿದೆ ಎಂದು ಹೆಬ್ರಿ ಎಸ್.ಆರ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಶ್ರೀ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹೆಬ್ರಿ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ತಾಲೂಕು ಜನಜಾಗೃತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಮಧ್ಯಮ ವರ್ಗದ ಜನರ ಬದುಕು ಹಸನಾಗಿದೆ. ಧರ್ಮದ ತಳಹದಿಯಲ್ಲಿ ಸ್ವ ಸಹಾಯ ಒಕ್ಕೂಟಗಳ ಮೂಲಕ ಫಲಾನುಭವಿಗಳಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಮಾಡುತ್ತಿರುವ ಸೇವೆ, ಸಾಧನೆಯು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಕಳ ತಾಲೂಕು ಕೇಂದ್ರ ಒಕ್ಕೂಟಗಳ ಸಮಿತಿಯ ಸ್ಥಾಪಕ ಅಧ್ಯಕ್ಷ ಶಾಂತಿರಾಜ್ ಜೈನ್ ಮಾತಾನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜನ ಜಾಗೃತಿ ಪದಾಧಿಕಾರಿ ನಂದ ಕುಮಾರ್ ಹೆಗ್ಡೆ, ಉಡುಪಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಿರ್ದೇಶಕ ನಾಗರಾಜ ಶೆಟ್ಟಿ, ಹೆಬ್ರಿ ಶಾಖೆ ಬ್ಯಾಂಕ್ ಆಫ್ ಬರೋಡ ಪ್ರಬಂಧಕ ಪವನ್ ಕುಮಾರ್ ಮಾಹಿತಿ ನೀಡಿದರು.ಹೆಬ್ರಿ ಉದ್ಯಮಿ ಭಾಸ್ಕರ್ ಜೋಯಿಸ್, ಹೆಬ್ರಿ ತಾಲೂಕು ಕೇಂದ್ರ ಸಮಿತಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಪ್ರವೀಣ್ ಹೆಗ್ಡೆ, ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಸುರೇಶ್ ಭಂಡಾರಿ, ಯೋಜನೆಯ ಪದಾಧಿಕಾರಿಗಳಾದ ನರೇಂದ್ರ ನಾಯಕ್, ಶಾಲಿನಿ ಭಂಡಾರಿ, ಯೋಗೀಶ್ ಮುದ್ರಾಡಿ, ಸಪ್ನಾ, ಹರೀಶ್ ಚೇರ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ಸ್ವಾಗತಿಸಿದರು. ಮೇಲ್ವಿಚಾರಕರಾದ ಉದಯ ನಿರೂಪಿಸಿ, ವಂದಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚಂದ್ರಾವತಿ, ಯೋಜನೆಯ ಕೃಷಿ ಅಧಿಕಾರಿ ಉಮೇಶ್, ಸೇವಾ ಪ್ರತಿನಿಧಿಗಳು ಹಾಜರಿದ್ದು ಸಹಕರಿಸಿದರು. ಪ್ರಗತಿ ಬಂಧು ಸ್ವ ಸಹಾಯ ಒಕ್ಕೂಟಗಳ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.