ಹೈನುಗಾರಿಕೆಯಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ

| Published : Jun 17 2024, 01:30 AM IST

ಸಾರಾಂಶ

ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಗ್ರಾಮಾಂತರ ಪ್ರದೇಶದ ಜನರ ಆರ್ಥಿಕಾಭಿವೃದ್ಧಿ ಆಗುವುದರ ಜೊತೆಗೆ ಆರೋಗ್ಯವೂ ಸುಧಾರಿಸಲಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಗ್ರಾಮಾಂತರ ಪ್ರದೇಶದ ಜನರ ಆರ್ಥಿಕಾಭಿವೃದ್ಧಿ ಆಗುವುದರ ಜೊತೆಗೆ ಆರೋಗ್ಯವೂ ಸುಧಾರಿಸಲಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಮುದುಗುಪ್ಪೆ ಗ್ರಾಮದಲ್ಲಿ ಭಾನುವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ಬಿಎಂಸಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಐದು ರುಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.

ಗ್ರಾಮಸ್ಥರ ಬೇಡಿಕೆಯಂತೆ ಇಲ್ಲಿಗೆ ಪಶು ಆಸ್ಪತ್ರೆ ಮಂಜೂರು ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಈ ಸಂಬಂಧ ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಇದರ ಜೊತೆಗೆ ಮೇಲೂರು ಗ್ರಾಮದ ಪಶು ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ಭರ್ತಿ ಮಾಡಲು ಗಮನ ಹರಿಸುವುದಾಗಿ ತಿಳಿಸಿದರು.

ಭೇರ್ಯ, ಹೊಳೆನರಸಿಪುರ ಮುಖ್ಯ ರಸ್ತೆಯಿಂದ ಮುದುಗುಪ್ಪೆ, ಕುಪ್ಪಳ್ಳಿ, ತಂದ್ರೆ ಗ್ರಾಮದ ಸಂಪರ್ಕ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸಿ ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡುವುದಾಗಿ ಪ್ರಕಟಿಸಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರನ್ನು ಭೇಟಿಯಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅವರು ತಿಂಗಳಾಂತ್ಯದ ವೇಳೆಗೆ ಬೇಡಿಕೆ ಪಟ್ಟಿ ಪಡೆದು ಅಗತ್ಯವಿರುವ ಅನುದಾನ ಕೊಡುವ ಮಾತು ಕೊಟ್ಟಿದ್ದು, ಆನಂತರ ಆದ್ಯತೆಯ ಮೇರೆಗೆ ಅಭಿವೃದ್ಧಿ ಕೆಲಸ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ಪ್ರಸ್ತುತ ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ ನಿತ್ಯ ಹತ್ತು ಲಕ್ಷ ಲೀಟರ್ ಹಾಲು ಸಂಗ್ರಹಣೆ ಮಾಡುತ್ತಿದ್ದು, ನಾವು ರಾಜ್ಯದ ಇತರ ಹಾಲು ಒಕ್ಕೂಟಗಳಿಂದ ಉತ್ಪಾದಕರಿಗೆ ಹೆಚ್ಚು ಹಣ ನೀಡುತ್ತಿದ್ದು, ಇದರೊಂದಿಗೆ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ, ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ 36 ಬಿಎಂಸಿ ಕೇಂದ್ರಗಳನ್ನು ತೆರೆಯಲಾಗಿದ್ದು, ಮುಂದೆ ಮತ್ತೆ ಐದು ಕೇಂದ್ರ ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು.

ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್ ಮಾತನಾಡಿ, ಸಂಘದ ಸದಸ್ಯರಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕಿವಿಮಾತು ಹೇಳಿದರು.

ಮೈಮುಲ್ ಎಂಡಿ ಬಿ.ಎನ್. ವಿಜಯಕುಮಾರ್, ಸಂಘದ ಅಧ್ಯಕ್ಷೆ ಭಾರತಿ ಪುಟ್ಟರಾಮೆಗೌಡ ಮಾತನಾಡಿದರು. ಹಾಲು ಉತ್ಪಾದಕರ ಮಹಿಳಾ ಸಂಘದ ಕಟ್ಟಡ ಮತ್ತು ಬಿಎಂಸಿ ಕೇಂದ್ರ ನಿರ್ಮಾಣ ಮಾಡಲು ಉಚಿತವಾಗಿ ಸ್ಥಳ ದಾನ ಮಾಡಿದ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮು, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗಂಧನಹಳ್ಳಿ ಮಹದೇವ್, ಉಪಾಧ್ಯಕ್ಷ ಬೆಟ್ಟಹಳ್ಳಿ ದಿನೇಶ್, ಮೈಮುಲ್ ಸಹಾಯಕ ವ್ಯವಸ್ಥಾಪಕ ಡಾ. ಪ್ರವೀಣ್ ಪತ್ತಾರ್, ನಿವೃತ್ತ ವ್ಯವಸ್ಥಾಪಕ ಡಾ. ಸಣ್ಣತಮ್ಮೇಗೌಡ, ಗುತ್ತಿಗೆದಾರ ನವೀನ, ಸಂಘದ ಉಪಾಧ್ಯಕ್ಷೆ ಶಿವಲಿಂಗಮ್ಮ, ನಿರ್ದೇಶಕರಾದ ಪ್ರೇಮ, ಮಹದೇವಮ್ಮ, ಪಾರ್ವತಿ, ರೇಣುಕಾ, ಜವರಮ್ಮ, ರತ್ನಮ್ಮ, ಭಾಗ್ಯ ಕುಮಾರ್, ಲಕ್ಷ್ಮೀ, ಸವಿತಾ ಲಕ್ಷ್ಮೀದೇವಯ್ಯ, ಮುಖ್ಯ ಕಾರ್ಯನಿರ್ವಣಾಧಿಕಾರಿ ಸುವರ್ಣ ಕೃಷ್ಣೇಗೌಡ ಮೊದಲಾದವರು ಇದ್ದರು.

ನಮ್ಮದು ಅಭಿವೃದ್ಧಿ ರಾಜಕಾರಣ:

ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹೇಮಾವತಿ, ಹಾರಂಗಿ, ಚಾಮರಾಜ ಎಡದಂಡೆ, ಬಲದಂಡೆ ಮತ್ತು ಕಟ್ಟೆಪುರ ನಾಳೆಗಳ ಹೂಳು ತೆಗೆದು ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಇದರ ಜೊತೆಗೆ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸಮರ್ಪಕ ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜು ಮಾಡಲು ಈಗಾಗಲೇ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.ನಾವೆಲ್ಲ ಚುನಾವಣೆ ವೇಳೆ ಮಾತ್ರ ರಾಜಕಾರಣ ಮಾಡಬೇಕು. ಉಳಿದ ಸಮಯದಲ್ಲಿ ಕ್ಷೇತ್ರ ಮತ್ತು ಗ್ರಾಮಗಳ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ಹರಿಸಲು ನಾನು ಜಾತ್ಯತೀತ ರಾಜಕಾರಣ ಮಾಡುತ್ತಿದ್ದು, ಸರ್ವರೂ ನನ್ನ ಸಂಪರ್ಕದಲ್ಲಿದ್ದು ಉತ್ತಮ ಕೆಲಸ ಮಾಡಲು ಸಹಕಾರ ನೀಡಬೇಕಾಗಿ ಅವರು ಕೋರಿದರು.