ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಅರಳಕುಪ್ಪೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರದ ಸಮಾರೋಪ ಸಮಾರಂಭ, ತೋಟಗಾರಿಕೆ ಮೇಳ-2024 ನಡೆಯಿತು.ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾ ವಿದ್ಯಾಲಯ ಮೈಸೂರು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮೈಸೂರು ಆಶ್ರಯದಲ್ಲಿ ತೋಟಗಾರಿಕೆ ಶಿಕ್ಷಣದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಳೆದ ಎರಡೂವರೆ ತಿಂಗಳಿನಿಂದ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಆ ಭಾಗದ ವ್ಯವಸಾಯ ಪದ್ಧತಿ, ಬೆಳೆಗಳು, ಮಣ್ಣಿನ ಗುಣ ಇತ್ಯಾದಿಗಳನ್ನು ಅಭ್ಯಾಸ ನಡೆಸಿ ಕಾರ್ಯಾನುಭವ ಪಡೆದುಕೊಂಡರು.
ಸಮಾರಂಭದಲ್ಲಿ ವಿದ್ಯಾರ್ಥಿಗಳು ಸುಮಾರು 12 ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಿದರು. ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ಮಾಹಿತಿ ನೀಡಲು 10ಕ್ಕೂ ಹೆಚ್ಚು ಸ್ಟಾಲ್ ತೆರೆಯಲಾಗಿತ್ತು.ಕೃಷಿ, ತೋಟಗಾರಿಕೆ, ಅರಣ್ಯ, ಕೀಟ ಪ್ರಪಂಚ, ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ, ವಲಯ ಕೃಷಿ ಸಂಶೋಧನಾ ಕೇಂದ್ರ ವಿ.ಸಿ.ಫಾರ್ಮ್, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ವೃಕ್ಷ ಲ್ಯಾಂಟ್ ಸ್ಕೇಪಿಂಗ್ ಮತ್ತು ನರ್ಸರಿ, ಜೇನು ಕೃಷಿ ಹಾಗೂ ಅಣಬೆ ಕೃಷಿ, ಹಣ್ಣು ಮತ್ತು ತರಕಾರಿ ವಿಜ್ಞಾನ, ಪುಷ್ಪ ಕೃಷಿ, ಭೂ ವಿನ್ಯಾಸ ಶಾಸ್ತ್ರ, ಕೋಯ್ಲೇತ್ತರ ನಿರ್ವಹಣಾ ತಂತ್ರಜ್ಞಾನ, ಬೇಸಾಯ ಶಾಸ್ತ್ರ, ಮಣ್ಣು ವಿಜ್ಞಾನ, ಬೀಜ ವಿಜ್ಞಾನ ಮತ್ತು ಕೃಷಿ ಎಂಜಿನಿಯರಿಂಗ್, ಸೂಕ್ಷ್ಮಾಣು ಜೀವಿ ಶಾಸ್ತ್ರ, ಸಾವಯವ ಮತ್ತು ಜೈವಿಕ ಉತ್ಪನ್ನಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸ್ಟಾಲ್ ತೆರೆದು ರೈತರಿಗೆ ಮಾಹಿತಿ ನೀಡಲಾಯಿತು.
ಕೃಷಿಯನ್ನು ಲಾಭದಾಯಕಗೊಳಿಸುವ ನಿಟ್ಟಿನಲ್ಲಿ ತೋಟಗಾರಿಕೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಗಳನ್ನು ಪ್ರದರ್ಶಿಸಿದರು. ಮಣ್ಣು ಪರೀಕ್ಷೆ ಮತ್ತು ಸಾವಯವ ಗೊಬ್ಬರ ಪುಷ್ಠೀಕರಣ ಪ್ರಾತ್ಯಕ್ಷಿಕೆ, ಸಾವಯವ ಗೊಬ್ಬರ ಮತ್ತು ಮೇವು ತಯಾರಿಕಾ ಪ್ರಾತ್ಯಕ್ಷಿಕೆ, ಸಸ್ಯಾಭಿವೃದ್ಧಿ ಪ್ರಾತ್ಯಕ್ಷಿಕೆ, ಬಿತ್ತನೆ ಬೀಜ ಸಂಬಂಧಿಸಿದ ಪ್ರಾತ್ಯಕ್ಷಿಕೆ, ಸಸ್ಯ ಸಂರಕ್ಷಣೆ ಪ್ರಾತ್ಯಕ್ಷಿಕೆ, ಆಹಾರ ಮತ್ತು ರಸಗೊಬ್ಬರ ಕಲಬೆರಕೆ ವಿಶ್ಲೇಷಣೆ ಪ್ರಾತ್ಯಕ್ಷಿಕೆ ನೀಡಲಾಯಿತು.ಸಾವಯವ ಉತ್ಪನ್ನಗಳ ತಯಾರಿಕಾ ಪ್ರಾತ್ಯಕ್ಷಿಕೆ, ಭತ್ತದ ಬೆಳೆಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ, ಕಬ್ಬು ಬೆಳೆಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ ಮತ್ತು ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ ಏರ್ಪಡಿಸುವ ಮೂಲಕ ರೈತರು ಯಾವ ರೀತಿಯ ಕೃಷಿ ಪದ್ಧತಿ ಅಳವಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು. ಕಟ್ಟೇರಿ, ಅರಳಕುಪ್ಪೆ ಮತ್ತು ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ವಿವರಿಸಲಾಯಿತು.
ಡ್ರೋಣ್ ಮೂಲಕ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಬಗ್ಗೆ ಡ್ರೋಣ್ ಬಳಸಿ ಪ್ರಾತ್ಯಕ್ಷಿಕೆ ನೀಡಲಾಯಿತು. ತೋಟಗಾರಿಕೆ ವಿದ್ಯಾರ್ಥಿಗಳು ಅಚ್ಚಕಟ್ಟಾಗಿ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ ಬಗ್ಗೆ ರೈತರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.ಶಿಬಿರದ ಸಮಾರೋಪ ಸಮರಂಭವನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ವಿಷ್ಣುವರ್ಧನ ಉದ್ಘಾಟಿಸಿದರು. ತೋಟಗಾರಿಕೆ ಮಹಾ ವಿದ್ಯಾಲಯ ಮೈಸೂರು ಡೀನ್ ಡಾ.ಜಿ.ಜನಾರ್ಧನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ತೋಟಗಾರಿಕೆ ಇಲಾಖೆ ಸಂಶೋಧನಾ ನಿರ್ದೇಶಕ ಡಾ.ಎಚ್.ಪಿ.ಮಹೇಶ್ವರಪ್ಪ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಕೃಷಿ ಜಂಟಿ ನಿರ್ದೇಶಕ ವಿ.ಅಶೋಕ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಪಿ.ಸೌಮ್ಯಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್, ತಾಪಂ ಇಒ ಲೋಕೇಶ್ ಮೂರ್ತಿ ಇತರರು ಇದ್ದರು.