ಗ್ರಾಮೀಣ ಜನತೆಗೆ ಕಾನೂನು ಅರಿವು ಅಗತ್ಯ

| Published : Jan 18 2025, 12:46 AM IST

ಸಾರಾಂಶ

ಸರ್ಕಾರ ಯೋಜನೆಗಳಾದ ಲೇಬರ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಪಿಂಚಣಿ, ನರೇಗಾ, ಜಾಬ್ ಕಾರ್ಡ್ ಹಾಗೂ ಭೂಮಿಗೋಸ್ಕರ ನಮೂನೆ 53 ಮತ್ತು 57 ರಲ್ಲಿ ಅರ್ಜಿ ಹಾಕಿರುವ ಅರ್ಹ ಫಲನುಭವಿಗಳಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರುಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ಸಾಮಾಜಿಕ ಭದ್ರತೆ, ಪರಿಸರ, ಶಾಲೆ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ವೈಯುಕ್ತಿಕ ಮತ್ತು ಸಮುದಾಯದ ಸೌಲಭ್ಯ ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸುವುದೇ ಕಾನೂನಿನ ಅರಿವು ನೆರವು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಂಸ್ಥೆ ಟ್ರಸ್ಟ್‌ ನಿರ್ದೇಶಕಿ ಚಿತ್ರಾವತಿ ಹೇಳಿದರು.

ತಾಲ್ಲೂಕಿನ ರಮಾಪುರ ಗ್ರಾಮದ ಪಂಚಾಯಿತಿ ಆವರಣದಲ್ಲಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಅರಿವು ಕಾರ್ಯಾಗಾರವನ್ನು ಸಸಿಗೆ ನೀರುಣ್ಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸೌಲಭ್ಯ ತಲುಪಿಸುವ ಕಾರ್ಯ

ಸರ್ಕಾರ ಯೋಜನೆಗಳಾದ ಲೇಬರ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಪಿಂಚಣಿ, ನರೇಗಾ, ಜಾಬ್ ಕಾರ್ಡ್ ಹಾಗೂ ಭೂಮಿಗೋಸ್ಕರ ನಮೂನೆ 53 ಮತ್ತು 57 ರಲ್ಲಿ ಅರ್ಜಿ ಹಾಕಿರುವ ಅರ್ಹ ಫಲನುಭವಿಗಳಿಗೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ, ಇದಕ್ಕೋಸ್ಕರ ತಾಲ್ಲೂಕಿನಲ್ಲಿ 300 ಜನ ಕಾಯಕ ಬಂಧುಗಳಿಗೆ ತಾಲ್ಲೂಕು ಪಂಚಾಯಿತಿಯಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ಅನೇಕರಲ್ಲಿ ಆಸ್ತಿ ಜಂಜಾಟ, ಕೌಟುಂಬಿಕ ಕಲಹ ಸೇರಿದಂತೆ ಇನ್ನಿತರ ಸಮಸ್ಯೆಗಳಿರುತ್ತವೆ. ಕಾನೂನಿನ ಅರಿವು ಇಲ್ಲದ ಕಾರಣಕ್ಕೆ ಕೆಲವೊಮ್ಮೆ ಕಲಹಗಳು ವಿಕೋಪಕ್ಕೆ ಹೋಗಿ ಕೋರ್ಟ್, ಕಚೇರಿ ಅಲೆಯುವ ಪರಿಸ್ಥಿತಿ ಉಂಟಾಗುತ್ತವೆ. ಇಂತಹ ಘಟನೆಗಳನ್ನು ತಪ್ಪಿಸಲು ಈ ಕಾರ್ಯಕ್ರಮದ ಮೂಲಕ ಜನರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಮಹಿಳೆಯರಿಗೆ ಸೌಲಭ್ಯಗಳ ಮಾಹಿತಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪಾರಿಜಾತ ಮಾತನಾಡಿ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ,ತಡೆಗಟ್ಟುವುದು, ಸೇರಿದಂತೆ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಸಿಗುವ ಸರ್ಕಾರದ ಹಲವು ಸೌಲಭ್ಯಗಳ ಬಗ್ಗೆ ತಿಳಿಸಿದರು. ಕೃಷಿ ಇಲಾಖೆಯ ಮೈಲಾರಪ್ಪ ಮಾತನಾಡಿ, ಸರ್ಕಾರದಿಂದ ನೀರಿನ ಮಿತ ಬಳಕೆಗೆ ಸರ್ಕಾರದಿಂದ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಲ್ಲಿ ಯಾವ ಸೌಲಭ್ಯಗಳು ಲಭ್ಯವಿದೆ, ಹಾಗೂ ರೈತರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್, ಪಿಂಚಣಿ ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಪಂಚಾಯಿತಿ ಅಧ್ಯಕ್ಷೆ ನಾಗಮಣಿ, ಬಾಲಗಂಗಾಧರ್, ವೆಂಕಟೇಶ್ ನಾಯಕ್, ಮಯೂರ್, ಬಸವರಾಜು, ಸ್ವಾತಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.