ಸಾರಾಂಶ
ಕಡೂರು ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಕುರಿತ ಜಿಲ್ಲಾಮಟ್ಟದ ಕಾರ್ಯಾಗಾರ ನಡೆಯಿತು.
ಸುಸ್ತಿರ ಆಹಾರ ಪೌಷ್ಟಿಕಾಂಶ ಭದ್ರತೆ ಕುರಿತು ನಡೆದ ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿ ವರ್ಗಿಸ್ ಕ್ಲೀಟಸ್ ಅಭಿಮತ
ಕನ್ನಡಪ್ರಭ ವಾರ್ತೆ ಕಡೂರುಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಕೆಕೆಎಸ್, ಬಿಎಂ2 ಯೋಜನೆ ಮತ್ತು ವಿಕಸನ ಸಂಸ್ಥೆ ಸಹಯೋಗದಲ್ಲಿ ಸುಸ್ತಿರ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರ ನಡೆಯಿತು.
ಕಾರ್ಯಾಗಾರ ಊದ್ಘಾಟಿಸಿ ಮಾತನಾಡಿದ ತರೀಕೆರೆಯ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ. ವರ್ಗಿಸ್ ಕ್ಲೀಟಸ್ ಅವರು, ಸರ್ಕಾರವು ಜನರಿಗೆ ನೀಡುತ್ತಿರುವ ಪಿಡಿಎಸ್ ವ್ಯವಸ್ಥೆಯಲ್ಲಿ ಹಲವು ಲೋಪಗಳು ಕಂಡು ಬಂದ ಕಾರಣ ಕಾರ್ಯಾಗಾರದ ಮೂಲಕ ವಿತರಣೆ ಸಮಯದಲ್ಲಾಗುವ ಲೋಪಗಳನ್ನು ಸರಿಪಡಿಸಲು ಮಹಿಳಾ ಒಕ್ಕೂಟದ ಸದಸ್ಯರು ವಕಾಲತ್ತು ವಹಿಸಿ ಗ್ರಾಮೀಣ ಭಾಗದ ಜನರಿಗೆ ಉತ್ತಮ ಗುಣಮಟ್ಟದ ಆಹಾರ ಧಾನ್ಯ ಸಿಗುವಂತಾಗಬೇಕೆಂಬುದು ಇದರ ಉದ್ದೇಶ ಎಂದು ತಿಳಿಸಿದರು.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಜಗದೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಹಸಿವು ಮುಕ್ತರಾಗಬೇಕೆಂದು ರಾಜ್ಯ ಸರ್ಕಾರ ಪಿಡಿಎಸ್ ವ್ಯವಸ್ಥೆ ಜಾರಿಗೆ ತಂದಿದೆ. ಇದರಲ್ಲಿ ಲೋಪಗಳು ಕಂಡುಬಂದಲ್ಲಿ ಲಿಖಿತವಾಗಿ ಕಚೇರಿಗೆ ಅಥವಾ ಉಚಿತ ಸಹಾಯವಾಣಿಗೆ ದೂರು ನೀಡಬಹುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್ ಮಾತನಾಡಿ, ಇಲಾಖೆಯಿಂದ ಅಸ್ಪೃಶ್ಯತೆ ನಿವಾರಣೆ ಮಾಡಲು ಹಾಗೂ ಅಂತರ ಜಾತಿ ವಿವಾಹ ಪ್ರೋತ್ಸಾಹಿಸಲು ಸರ್ಕಾರದಿಂದ ಪರಿಶಿಷ್ಟ ಜಾತಿ ಹುಡುಗಿಯನ್ನು ಬೇರೆ ಜಾತಿ ಹುಡುಗ ವಿವಾಹವಾದರೆ 3 ಲಕ್ಷ ರು. ಮತ್ತು ಪರಿಶಿಷ್ಟ ವರ್ಗದ ಹುಡುಗನನ್ನು ವಿವಾಹವಾದರೆ 2.50ಲಕ್ಷ ರು. ನೀಡಲಾಗುವುದು. ಅಲ್ಲದೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಸತಿ ಶಾಲೆಗಳಿದ್ದು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.ಕಾರ್ಯಗಾರದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ರವಿರಾಜ್, ಪ್ರೇಮ ಜ್ಯೋತಿ ಮಹಿಳಾ ಒಕ್ಕೂಟದ ಸುಮ, ವಸಂತಕುಮಾರಿ, ತಾಲೂಕು ಸುಗ್ರಾಮ ಅಧ್ಯಕ್ಷೆ ಲತಾ, ಸಂಪನ್ಮೂಲ ವ್ಯಕ್ತಿ ಸಿಂಹಾಜಿ, ಎನ್.ಎಸ್. ಜಯಣ್ಣ ಮಾಹಿತಿ ನೀಡಿದರು.
ವಿಕಸನ ಸಂಸ್ಥೆಯ ಶ್ರೀನಿವಾಸ್, ಎಂ.ಎಚ್.ಲಕ್ಷ್ಮಣ್, ಮುಕುಂದ ಸೇರಿದಂತೆ ಅನೇಕರು ಹಾಜರಿದ್ದರು.