ಸಾರಾಂಶ
ಸೇವೆಯಿಂದ ನಿವೃತ್ತರಾದ ಕೆ.ಟಿ.ಶೇಷಣ್ಣ ಗೌಡರಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಗ್ರಾಮೀಣ ಅಂಚೆನೌಕರರು ಸಂಘಟಿತ ಹೋರಾಟ ಮಾಡಿದ ಫಲವಾಗಿ ಹಲವು ಸವಲತ್ತು ಪಡೆಯಲು ಸಾಧ್ಯವಾಗಿದೆ ಎಂದು ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಪ್ರಕಾಶ್ ಹೇಳಿದರು.
ಬುಧವಾರ ಸಂಜೆ ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ನಡೆದ ಹೊನ್ನೇಕೊಡಿಗೆ ಉಪ ಅಂಚೆಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಟಿ.ಶೇಷಣ್ಣಗೌಡರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.41 ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಿಗೆ ಆಯೋಜಿಸಿರುವ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮೇಲಾಧಿಕಾರಿಗಳು ಭಾಗವಹಿಸದಿರುವುದು ಬೇಸರದ ಸಂಗತಿ. ಗ್ರಾಮೀಣ ಅಂಚೆ ನೌಕರರು ದಿನಕ್ಕೆ 7 ರಿಂದ 8 ಗಂಟೆವರೆಗೂ ಕೆಲಸ ಮಾಡಿದರೂ ಕಡಿಮೆ ಸಂಬಳ ನೀಡಿ ಮಲತಾಯಿ ಧೋರಣೆ ಮಾಡಲಾಗುತ್ತಿದೆ . ಅಂಚೆ ನೌಕರರು ಸರ್ಕಾರಕ್ಕೆ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೌಕರರ ಸಂಘಟಿತ ಹೋರಾಟದ ಫಲವಾಗಿ ತುರ್ತು ರಜೆ ಸೌಲಭ್ಯ ಲಭಿಸಿದೆ. ಮಹಿಳಾ ಕೆಲಸಗಾರರಿಗೆ ಹೆರಿಗೆ ರಜೆ ಸೌಲಭ್ಯ ಲಭಿಸಿದೆ. ಗ್ರಾಮೀಣ ಅಂಚೆ ನೌಕರರಾಗಿ ಸೇವೆ ಸಲ್ಲಿಸಿದವರಿಗೆ 62 ವರ್ಷದ ನಂತರ ಅವರ ಅವಲಂಭಿತರಿಗೆ ಕೆಲಸ ಕೊಡುವ ಆದೇಶ ಬಂದಿದೆ. ನಿವೃತ್ತಿಗೆ ಟರ್ಮಿನೆಟ್ ಎಂಬ ಪದಬಳಕೆ ಬದಲಿಗೆ ರಿಟೈರ್ಡ್ ಮೆಂಟ್ ಎಂದು ಪ್ರಮಾಣ ಪತ್ರ ಕೊಡುವ ವ್ಯವಸ್ಥೆ ಜಾರಿಗೆ ಬಂದಿದೆ ಎಂದರು.
ಮೇ 18ರಂದು ಗ್ರಾಮೀಣ ಅಂಚೆ ನೌಕರರ ಸಮಾವೇಶವನ್ನು ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದು ಕೇಂದ್ರ ಸಂಘದ ನಾಯಕರು ಆಗಮಿಸಲಿದ್ದಾರೆ. ಎಲ್ಲಾ ಗ್ರಾಮೀಣ ಅಂಚೆ ನೌಕರರು ಸಮಾವೇಶದಲ್ಲಿ ಭಾಗವಹಿಸಬೇಕು. ಸರ್ಕಾರಕ್ಕೆ ಸಂಘಟನೆ ಮೂಲಕ ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಬೇಕು. ನಿವೃತ್ತ ಕೆ.ಟಿ.ಶೇಷಣ್ಣ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿ, ಕೆ.ಟಿ.ಶೇಷಣ್ಣ ಗೌಡರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಘವನ್ನು ಸದೃಢವಾಗಿ ಕಟ್ಟಲು ಎಲ್ಲರಿಗೂ ಉತ್ಸಾಹ ತುಂಬಿದ್ದರು. ಹಲವು ಸಮಸ್ಯೆ ಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ಹೋರಾಟ ಮಾಡಿದ್ದರು. ಗ್ರಾಮೀಣ ಅಂಚೆ ನೌಕರರಿಗೆ ನಿವೃತ್ತಿ ನಂತರ ಪಿಂಚಣಿ ಬರುವುದಿಲ್ಲ. ಸರ್ಕಾರ ಗ್ರಾಮೀಣ ಅಂಚೆ ನೌಕರರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ದೂರಿದರು. ಹೋರಾಟದಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ. ನಿವೃತ್ತಿ ದಿನವೇ ಗ್ರ್ಯಾಜ್ಯುಟಿ ಸೌಲಭ್ಯ ಕೊಡುವಂತೆ ಒತ್ತಾಯಿಸಲಾಗುವುದು ಎಂದರು.ಸನ್ಮಾನ ಸ್ವೀಕರಿಸಿದ ಕೆ.ಟಿ.ಶೇಷಣ್ಣ ಗೌಡ ಮಾತನಾಡಿ, ಕೆಲಸಕ್ಕೆ ಸೇರುವಾಗಲೇ ನಿವೃತ್ತಿಯನ್ನು ಜೊತೆಗೆ ತೆಗೆದುಕೊಂಡು ಬಂದಿರುತ್ತೇವೆ. ಅಂಚೆ ಇಲಾಖೆಗೆ ಸೇರಿದ ಮೇಲೆ ಜ್ಞಾನಾರ್ಜನೆ ಮತ್ತು ಅನುಭವ ಎರಡನ್ನು ಪಡೆದುಕೊಂಡೆ. ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರದೇವಿಯವರು ತಮ್ಮ ಮನವಿ ಮೇರೆಗೆ ಹೊನ್ನೇಕೊಡಿಗೆಗೆ ಉಪ ಅಂಚೆ ಕಚೇರಿ ಮಂಜೂರು ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಗ್ರಾಮೀಣ ಅಂಚೆ ನೌಕರರು ಪಿಂಚಣಿ ಪಡೆಯುವ ನಿಟ್ಟಿನಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದರು.
ಅಂಚೆ ಇಲಾಖೆಯ ರವಿಶಂಕರ್, ತಿಪ್ಪೇಶ್ ರಫೀಕ್, ಕಡಹಿನಬೈಲು ಗ್ರಾಮ ಪಂಚಾಯಿತಿ ಸದಸ್ಯ ಎ.ಬಿ. ಮಂಜುನಾಥ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ರಾಮಮೋಹನ್ ಮಾತನಾಡಿದರು.ಅಧ್ಯಕ್ಷತೆಯನ್ನು ಮುಖ್ಯ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಅರುಣ್ ಕುಮಾರ್ ವಹಿಸಿದ್ದರು. ನಿಧಿಶ್ರೀ, ರಿತಿನ್, ಎಸ್.ನಾಗೇಶ್, ತಕ್ಷಕ್ ಉಪಸ್ಥಿತರಿದ್ದರು.