ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮೀಣ ಕ್ರೀಡೆ ಕಬಡ್ಡಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್. ಯೋಗೇಶ್ ತಿಳಿಸಿದರು.ತಾಲೂಕಿನ ಹೊಸಬೂದನೂರು ಗ್ರಾಮದ ಶೀ ಕಾಶಿವಿಶ್ವನಾಥ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗ ಮಟ್ಟದ ಹೊನಲು-ಬೆಳಕಿನ ಕಬಡ್ಡಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಕ್ರೀಡೆಗಳಂತೆ ಗ್ರಾಮೀಣ ಕ್ರೀಡೆಗಳು ಸಹ ಬೌದ್ಧಿಕ ಮತ್ತು ಶಾರೀರಿಕವಾಗಿ ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಆದರೆ, ಅವುಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂದರು.
ನಮ್ಮಲ್ಲಿ ಕ್ರಿಕೆಟ್, ಟೆನ್ನಿಸ್, ಕುಸ್ತಿ, ಕಬಡ್ಡಿ ಇತ್ಯಾದಿ ಆಟಗಳಿಗೆ ಭಾರೀ ಜನಪ್ರಿಯತೆಯಿದೆ. ಇಷ್ಟೇ ಅಲ್ಲದೆ ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ, ಪ್ರತಿ ರಾಜ್ಯಗಳಲ್ಲಿ ಅನೇಕ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಿವೆ. ಅವುಗಳು ಇತ್ತೀಚಿನ ವರ್ಷಗಳಲ್ಲಿ ನಶಿಸಿ ಹೋಗುತ್ತಿವೆ. ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದು ಹೇಳಿದರು.ನಮ್ಮ ದೇಶದಲ್ಲಿ ದೇಸೀ ಕ್ರೀಡೆಗಳಿಗೆ ಸಂಸ್ಕೃತಿಯ ಸ್ಪರ್ಶವಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಬಡ್ಡಿ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಹಿನ್ನೆಲೆಯಲ್ಲಿ ಕಬಡ್ಡಿಯನ್ನು ಜಿಲ್ಲಾ ಕ್ರೀಡೆ ಎಂದು ಆಯ್ಕೆ ಮಾಡಲಾಗಿದೆ. ಹೊಸಬೂದನೂರು ಗ್ರಾಮದ ಯುವಜನತೆ ಕಬಡ್ಡಿ ಪಂದ್ಯಾವಳಿ ಏರ್ಪಡಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಎಚ್.ಎನ್. ಯೋಗೇಶ್ಕಬಡ್ಡಿ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ತಾಪಂ ಮಾಜಿ ಸದಸ್ಯ ಬಿ.ಎನ್.ರಘು, ಗ್ರಾಪಂ ಸದಸ್ಯರಾದ ನಾಗೇಶ್, ಅರುಣ ಕುಮಾರ್, ಶಿಲ್ಪ, ಗ್ರಾಮದ ಮುಖಂಡರಾದ ಜಯರಾಮ್, ಚಂದ್ರಪ್ಪ, ರವಿ, ಶಂಕರ್, ಶೇಖರ್, ಕುಮಾರ್, ಕಬಡ್ಡಿ ಪಂದ್ಯಾವಳಿಯ ಆಯೋಜಕರಾದ ಮಂಜು ಮತ್ತು ಚೈತ್ರೇಶ್ ಉಪಸ್ಥಿತರಿದ್ದರು.ಜೆಡಿಎಸ್ ಪ್ರತಿಭಟನೆ ಹಾಸ್ಯಾಸ್ಪದ: ಸಿ.ಆರ್.ರಮೇಶ್ ಟೀಕೆ
ಪಾಂಡವಪುರ: ಜೆಡಿಎಸ್ ಪಕ್ಷ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾಕಪ್ಪ ಸಾಕಪ್ಪ ಕಾಂಗ್ರೆಸ್ ಸರ್ಕಾರ ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್ ಟೀಕಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಜೆಡಿಎಸ್ ಹೀನಾಯ ಸ್ಥಿತಿ ತಲುಪಿದ್ದರೂ ಪಕ್ಷದ ನಾಯಕರಿಗೆ ಇನ್ನೂ ಬುದ್ದಿ ಬಂದಿಲ್ಲ. ಮೈತ್ರಿ ಪಕ್ಷ ಬಿಜೆಪಿಯ ಜನಾಕ್ರೋಶ ಯಾತ್ರೆಯಿಂದ ದೂರವಿಟ್ಟಿರುವುದೇ ಪೂರಕ ಸಾಕ್ಷಿ ಎಂದು ದೂರಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ನಾಯಕರು ಗ್ಯಾರಂಟಿ ಯೋಜನೆ ಹಣ ಬಿಡುಗಡೆ ಮಾಡುವಂತೆ ಹೋರಾಟ ನಡೆಸುತ್ತಾರೆ. ಇವರದೇ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷರು ಗ್ಯಾರಂಟಿ ಯೋಜನೆಯಿಂದ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಿಕೆ ನೀಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಜೋಕರ್ ಎಂದು ಕರೆದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡಲೇ ಜಿಲ್ಲೆಯ ಜನತೆಯಲ್ಲಿ ಕ್ಷಮೆಯಾಚಿಸಬೇಕು. ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ರಾಜ್ಯ ಹಾಗೂ ಮಂಡ್ಯ ಜಿಲ್ಲೆಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.